(ನ್ಯೂಸ್ ಕಡಬ) newskadaba.com ಕಡಬ, ಎ.25. ಕಡ್ಯ ಕೊಣಾಜೆ ಗ್ರಾಮದ ಯುವಕನೋರ್ವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದು ಆಸ್ಪತ್ರೆ ಕಂಟೈನ್ಮೆಂಟ್ ಝೋನ್ ಆಗಿರುವ ಬೆನ್ನಲ್ಲೇ ಯುವಕ ತನ್ನ ಮನೆಗೆ ಬಂದಿದ್ದು ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಅವರ ಮನೆಗೆ ಭೇಟಿ ನೀಡಿ ಹೋಂ ಕ್ವಾರಂಟೈನ್ನಲ್ಲಿರುವಂತೆ ಎಚ್ಚರಿಕೆ ನೀಡಿದ ಘಟನೆ ಏ.24ರಂದು ನಡೆದಿದೆ.
ಕಡ್ಯ ಕೊಣಾಜೆ ಗ್ರಾಮದ ಕಲ್ಲೂರು ನಿವಾಸಿಯಾಗಿರುವ ಯುವಕನೋರ್ವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ಆಸ್ಪತ್ರೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ ಬೆನ್ನಲ್ಲೆ ಏ.23ರಂದು ಯುವಕ ಮಂಗಳೂರಿನಿಂದ ಕೊಣಾಜೆಗೆ ಬಂದಿದ್ದರು ಎನ್ನಲಾಗಿದೆ. ಆದರೆ ಅವರು ಮನೆಯಲ್ಲಿರದೆ ಪರಿಸರದಲ್ಲಿ ತಿರುಗಾಡುತ್ತಿದ್ದು ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿತ್ತು, ಈ ಬಗ್ಗೆ ವಿಷಯ ತಿಳಿದ ಶಿರಾಡಿ ಆರೋಗ್ಯ ಇಲಾಖೆಯವರು ಹಾಗೂ ಪೋಲಿಸ್ ಇಲಾಖೆಯವರು ಆಗಮಿಸಿ ಯುವಕನಿಗೆ ಸೀಲ್ ಹಾಕಿ, ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಿದ್ದಾರೆ. ಅಲ್ಲದೆ ಮನೆಯವರನ್ನೂ ಎಲ್ಲಿಯೂ ತಿರುಗಾಡದಂತೆ ಸೂಚನೆ ನೀಡಲಾಗಿದ್ದರೂ ಮನೆಯವರು ಅಲ್ಲಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿದ್ದು ಇದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. ಕೂಡಲೇ ಆರೋಗ್ಯ ಮತ್ತು ಪೋಲಿಸ್ ಇಲಾಖೆಯವರು ಅವರಿಗೆ ಎಚ್ಚರಿಕೆ ನೀಡಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕೆಂದು ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.