ಮೃತದೇಹದಿಂದ ಕೊರೋನ ಸೋಂಕು ಹರಡುದಿಲ್ಲ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಎ.24: ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರಿಬ್ಬರ ಶವಸಂಸ್ಕಾರಕ್ಕೆ ಸಾರ್ವಜನಿಕ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ, ದ.ಕ. ಜಿಲ್ಲಾಡಳಿತ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದು ಈ ಬಗ್ಗೆ ಪ್ರಕಟನೆ ಹೊರಡಿಸಿದೆ.

ಜನಸಾಮಾನ್ಯರಲ್ಲಿ ಮಾಹಿತಿ ಕೊರತೆ ಹಾಗೂ ತಪ್ಪುಕಲ್ಪನೆಯಿಂದ ಶವ ಸಂಸ್ಕಾರಕ್ಕೆ ಕೆಲವೊಂದು ಕಡೆ ಅಡ್ಡಿಪಡಿಸುತ್ತಿದ್ದಾರೆ. ಆದರೆ ಕೊರೋನ ಸೋಂಕಿತರ ಮೃತದೇಹದಿಂದ ಸೋಂಕು ಹರಡಿರುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಜನರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕೆಲವೊಂದು ಮುನ್ನೆಚ್ಚರಿಕೆ ವಹಿಸಿ ಶವಸಂಸ್ಕಾರವನ್ನೂ ವೀಕ್ಷಿಸಿ ಕೆಲವು ಸಂಪ್ರದಾಯಗಳನ್ನು ನಡೆಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶದನದಂತೆ, ಕೊರೋನ ಸೋಂಕಿತರು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರದ ಬಗ್ಗೆ ಕೇಂದ್ರ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೊರೋನ ಸೋಂಕಿತ ಮೃತರ ದೇಹವನ್ನು ಸಂಬಂಧಿಕರು ದೂರದಿಂದ ವೀಕ್ಷಿಸಬಹುದು. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಿಸಲು ಅವಕಾಶ ನೀಡಬಹುದು. ಆದರೆ, ಮೃತ ದೇಹವನ್ನು ಮುಟ್ಟುವುದಕ್ಕಾಗಲಿ, ಮುತ್ತಿಕ್ಕುವುದಕ್ಕಾಗಲಿ ಅಥವಾ ತಬ್ಬಿಕೊಳ್ಳುವುದಕ್ಕಾಗಲಿ ಅವಕಾಶವಿಲ್ಲ. ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಸಾಮಾನ್ಯ ಶುಚಿತ್ವ ಅಂತರೆ ಕೈತೊಳೆಯುವುದು, ಮಾಸ್ಕ್ ಧಾರಣೆ ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬದ ಧಾರ್ಮಿಕ ಸಂಪ್ರದಾಯಗಳ ಅನುಸಾರ ಧಾರ್ಮಿಕ ಗ್ರಂಥಗಳ ಪಠಣ, ಪವಿತ್ರ ನೀರನ್ನು ಸಿಂಪಡಿಸುವುದು ಇತ್ಯಾದಿಗಳನ್ನು ದೇಹವನ್ನು ಮುಟ್ಟದೇ ಮಾಡಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

Also Read  ಮತ್ತೆ ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಭೂಕುಸಿತ ➤ 18 ಕುಟುಂಬಗಳ ಸ್ಥಳಾಂತರ

ಮೃತದೇಹವನ್ನು ಹೂಳುವುದು ಅಥವಾ ದಹನ ಈ ಎರಡು ವಿಧದಲ್ಲಿಯೂ ಸಹ ಅಂತ್ಯಕ್ರಿಯೆಯನ್ನು ಆಚರಿಸಬಹುದು. ದಹಿಸಿದ ದೇಹದ ಬೂದಿಯಿಂದ ಯಾವುದೇ ವೈರಾಣು ಹರಡುವಿಕೆ ಸಾಧ್ಯತೆ ಇಲ್ಲ ಆದ್ದರಿಂದ ಬೂದಿಯನ್ನು ಸಂಗ್ರಹಿಸಿ, ಇತರೆ ಧಾರ್ಮಿಕ ಆಚರಣೆಗಳನ್ನು ನಡೆಸಬಹುದು. ಕೊರೋನ ಸೋಂಕಿತರು ಮೃತರಾಗುವ ಮೊದಲು ಅವರ ಸಂಪರ್ಕಕ್ಕೆ ಬಂದಿದ್ದ ಬಂಧು ಬಳಗದವರಿಗೆ ಮೊದಲೇ ಕೊರೋನ ಹರಡಿರುವ ಸಾಧ್ಯತೆ ಇರುವುದರಿಂದ ಅಂತ್ಯ ಸಂಸ್ಕಾರದಲ್ಲಿ ಆ ಮನೆಮಂದಿ ಭಾಗಿಯಾಗುತ್ತಾರೆಂಬ ಕಾರಣಕ್ಕೆ ಅವರಿಂದ ಇತರರಿಗೆ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದಲೇ ಅಂತ್ಯ ಸಂಸ್ಕಾರದ ವೇಳೆ ಹೆಚ್ಚು ಜನರಿರಬಾರದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದು ಕೊಳ್ಳಬೇಕೆಂದು ಸೂಚಿಸಲಾಗುತ್ತಿದೆ

Also Read  ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಮಿಶ್ರಿತ ಧಾರಾಕಾರ ಮಳೆ ➤ ಕಡಬ ಪರಿಸರದಲ್ಲಿ ಮೋಡ ಕವಿದ ವಾತಾವರಣ

ಚಿತಾಗಾರದಲ್ಲಿ ಅಥವಾ ಹೂಳುವ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೋನದಿಂದ ಮೃತಪಟ್ಟವರ ದೇಹಗಳಿಂದ ಯಾವುದೇ ವಿಶೇಷ ಅಪಾಯವಿರುವುದಿಲ್ಲ. ಅವರು ಕೈಗಳನ್ನು ಮುಚ್ಚಿ, ಕಾಲುಚೀಲ ಧರಿಹಿಸುವುದು, ಮುಖ ಕವಚಗಳನ್ನು ಧರಿಹಿಸುವುದು (ಪಿಪಿಇ) ಹಾಗೂ ಕೈಗಳನ್ನು ತೊಳೆದುಕೊಳ್ಳುವಂತಹ ಸಾಮಾನ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top