ಮಂಗಳೂರು, ಎ.22: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದ್ದರೂ, ದ.ಕ. ಜಿಲ್ಲೆ ಕೊರೋನ ಹಾಟ್‌ಸ್ಪಾಟ್ ಆಗಿರುವುದರಿಂದ ಯಾವ ರೀತಿ ಮುಂದಿನ ಹೆಜ್ಜೆ ಇರಿಸಬೇಕು ಎಂಬ ಬಗ್ಗೆ ಎ.23ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹಲವು ಕಂಟೈನ್ಮೆಂಟ್ ಝೋನ್ ಇರುವುದರಿಂದ ಲಾಕ್‌ಡೌನ್ ಸಡಿಲಿಕೆ ಸಂದರ್ಭ ಎಚ್ಚರ ವಹಿಸಬೇಕಾಗಿದೆ. ಮೀನುಗಾರಿಕೆ ವಲಯದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ. ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಯಲ್ಲಿ ಸುಮಾರು 2 ಸಾವಿರಕ್ಕಿಂತಲೂ ಅಧಿಕ ಮಂದಿ ಏಕಕಾಲದಲ್ಲಿ ಗುಂಪುಗೂಡುವುದರಿಂದ ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಈ ಬಗ್ಗೆ ಮೀನುಗಾರ ಮುಖಂಡರ ಜೊತೆಗೂ ಚರ್ಚೆ ನಡೆಸಬೇಕಾಗಿದೆ ಎಂದರು.
ಸಂಸದರು, ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗುವುದು. ಗ್ಯಾರೇಜ್, ಡಾಬಾ, ಕೊರಿಯರ್ ಸೇವೆ, ಪ್ಲಂಬರ್, ಇಲೆಕ್ಟ್ರಿಶಿಯನ್, ಬಡಗಿ, ಕೇಬಲ್ ಹಾಗೂ ಡಿಟಿಎಚ್ ಆಪರೇಟರ್, ಅಗತ್ಯ ವಸ್ತುಗಳ ಆನ್‌ಲೈನ್ ಡೆಲಿವರಿ, ಆಹಾರ ಸಂಸ್ಕರಣಾ ಘಟಕ, ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವವರಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಸಡಿಲಿಕೆ ನಿಯಮ ಆದೇಶ ಹೊರಡಿಸದ ಹೊರತು ಯಾರು ಕೂಡ ಲಾಕ್‌ಡೌನ್ ಉಲ್ಲಂಘನೆ ಮಾಡುವಂತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.