❌ಸೀಲ್ ಡೌನ್ ಪ್ರದೇಶ ಹೇಗಿರಲಿದೆ ಗೊತ್ತೇ..? ➤ ಏನೆಲ್ಲಾ ಸೌಲಭ್ಯ ಇರಲಿದೆ ಎಂದು ತಿಳಿದಿದೆಯೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಎ.18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಗ್ರಾಮಗಳನ್ನು ಕಂಟೈನ್ ಮೆಂಟ್ ಝೋನ್ ಆಗಿ ಗುರುತಿಸಿ ಸರ್ಕಾರದ ಸೂಚನೆಯಂತೆ ಇನ್ಸಿಡೆಂಟ್‌ ಕಮಾಂಡರ್ ಗಳ ನೇಮಕಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅದೇಶಿಸಿದ್ದಾರೆ.

ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ ಗ್ರಾಮ, ಸುಳ್ಯ ತಾಲೂಕಿನ ಅಜ್ಜಾವರ, ಮಂಗಳೂರಿನ ತಾಲೂಕಿನ ತೊಕ್ಕೊಟ್ಟು ಗ್ರಾಮಗಳ ನಿರ್ದಿಷ್ಟ ಪ್ರದೇಶವನ್ನು ನಿಯಂತ್ರಿತ ವಲಯ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಸಂಪೂರ್ಣ ನಿರ್ಬಂಧ ಹೊರಡಿಸಲಾಗಿದೆ. ಈ ಪ್ರದೇಶದಲ್ಲಿ ಆರೋಗ್ಯ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಮಾತ್ರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ನಗರ ವ್ಯಾಪ್ತಿಯಲ್ಲಿ 5 ಕಿ.ಮೀ. ಮತ್ತು ಗ್ರಾಮಾಂತರ ವ್ಯಾಪ್ತಿಯ ನಿಯಂತ್ರಿತ ವಲಯದ 7 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಪ್ರತೀ ಮನೆಗಳಲ್ಲೂ ತಪಾಸಣೆ ನಡೆಸುವ ಸಂಬಂಧ ಬಫರ್ ಝೋನ್‌ನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ತೀವ್ರ ಬಫರ್ ಝೋನ್ ಎಂದು ಘೋಷಿಸಲಾಗಿದೆ.

Also Read  ಕಡಬ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಸಂಪ್ಯ ನಿಯಂತ್ರಿತ ವಲಯಕ್ಕೆ ಪುತ್ತೂರು ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಅವರನ್ನು ಘಟಕ ನಿಯಂತ್ರಕರೆಂದು ನಿಯುಕ್ತಿಗೊಳಿಸಲಾಗಿದೆ. ಘಟಕ ನಿಯಂತ್ರಕರು ಸಂಬಂಧಿತ ನಿಯಂತ್ರಣ ವಲಯದ ಸಂಪೂರ್ಣ ನಿರ್ವಹಣೆ ಮತ್ತು ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ.

ನಿಯಂತ್ರಿತ ವಲಯವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು ದಿನಸಿ, ಹಾಲು, ಮಾಂಸ, ಔಷಧ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ. ಯಾವುದೇ ಅಗತ್ಯತೆಗಳಿದ್ದರೂ ಘಟಕ ನಿಯಂತ್ರಕರು ವಲಯದೊಳಗೆ ಅಗತ್ಯ ವಸ್ತು ಮತ್ತು ಸೇವೆಗಳನ್ನು ಒದಗಿಸುವ ತಂಡವನ್ನು ರಚಿಸಿ ನ್ಯಾಯಬೆಲೆ ಅಂಗಡಿಗಳಿಂದ ನೀಡಲಾಗುವ ರೇಶನ್ ಒಳಗೊಂಡಂತೆ ಅವಶ್ಯಕ ವಸ್ತುಗಳನ್ನು ಮನೆಬಾಗಿಲಿಗೆ ಒದಗಿಸಲಿದ್ದಾರೆ.

Also Read  ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮೂರು ವಾಹನಗಳಿಗೆ ಢಿಕ್ಕಿ- ಮೂವರಿಗೆ ಗಾಯ

ನಿಯಂತ್ರಿತ ವಲಯದಿಂದ ಯಾವುದೇ ಕಾರಣಕ್ಕೂ ಯಾರೂ ಹೊರಗೆ ಹೋಗದಂತೆ ಮತ್ತು ಒಳಗೆ ಬಾರದಂತೆ ನಿಯಂತ್ರಿಸಲಿದ್ದು, ವಾಹನ ಸಂಚಾರಕ್ಕೂ ಅವಕಾಶ ನೀಡದಂತೆ ಪೊಲೀಸರು ಖಾಯಂ ಬ್ಯಾರಿಕೇಡ್‌ಗಳಿಂದ ಇಡೀ ವಲಯವನ್ನು ಸೀಲ್ ಡೌನ್ ಮಾಡಿದ್ದಾರೆ. ವೈದ್ಯಕೀಯ ತುರ್ತು ಸಂದರ್ಭಗಳಿಗೆ ಎಮರ್ಜೆನ್ಸಿ ಪಾಸ್‌ಗಳನ್ನು ಪೊಲೀಸರು ವಿತರಿಸಲಿದ್ದಾರೆ.

ವಲಯದಲ್ಲಿ ಒಂದು ಆರೋಗ್ಯ ಹೊರಠಾಣೆ ಸ್ಥಾಪಿಸಿ ಪ್ರತಿ ದಿನ 50 ಮನೆಗಳ ತಪಾಸಣೆ ನಡೆಸಿ ಎಲ್ಲಾ ಮನೆಗಳ ಆರೋಗ್ಯ ಸ್ಥಿತಿಗತಿಯ ಮಾಹಿತಿಯನ್ನು ಪಡೆದು ಅಗತ್ಯವಿರುವ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ.

error: Content is protected !!
Scroll to Top