ಸೋಮವಾರದಿಂದ ಬೀಡಿ ಉದ್ಯಮ ಪುನರಾರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು, ಎಪ್ರಿಲ್ 18.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ (ಏ.20) ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀಡಿ ಕಂಪೆನಿಗಳ ಮಾಲೀಕರು, ಬೀಡಿ ಕಾರ್ಮಿಕ ಮುಖಂಡರ ಜತೆ ಸಭೆ ನಡೆಸಿ ಮಾತನಾಡುತ್ತಿದ್ದರು. ದ.ಕ. ಜಿಲ್ಲೆಯಲ್ಲಿ 1.90 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 21 ಸಾವಿರದಷ್ಟು ಬೀಡಿ ಕಾರ್ಮಿಕರಿದ್ದಾರೆ. ಕೋರೋನಾ ಹಿನ್ನೆಲೆಯಲ್ಲಿ ಬೀಡಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದು, ಬಡವರ ಜೀವನಾಧಾರಕ್ಕೆ ಸಮಸ್ಯೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಸೋಮವಾರದಿಂದಲೇ ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ. ಕಾರ್ಮಿಕರಿಗೆ ಶೇಕಡಾ 50 ರಷ್ಟು ಕೆಲಸ ನೀಡಲು ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು. ಬೀಡಿ ಕಾರ್ಮಿಕರಿಗೆ ಪ್ರತೀ ವರ್ಷ ಅಷ್ಟಮಿ ಅಥವಾ ಚೌತಿ ಸಂದರ್ಭ ಬೋನಸ್ ನೀಡಲಾಗುತ್ತಿದೆ. ಈ ಸಲ ಇದನ್ನು ಸ್ವಲ್ಪ ಬೇಗನೇ ನೀಡುವಂತೆ ಮಾಲೀಕರನ್ನು ಕೋರಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಮಾಲೀಕರು ತಿಳಿಸಿದ್ದಾರೆ ಎಂದು ಸಚಿವ ಕೋಟ ತಿಳಿಸಿದರು.  15 ದಿನ ಬಿಟ್ಟು ಮತ್ತೆ ಸಭೆ ಸೇರಿ ಬೀಡಿ ಉದ್ಯಮ ಪ್ರಗತಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.

Also Read  ನೆಟ್ಟಣ: ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ


ಸಭೆಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top