ದುಬೈ, ಎ. 18: ಕ್ಯಾನ್ಸರ್‌ನಿಂದಾಗಿ ಮೃತಪಟ್ಟ ಮಗನ ಅಂತ್ಯಕ್ರಿಯೆ ಕೇರಳದಲ್ಲಿ ನಡೆದಾಗ ಯುಎಇಯಲ್ಲಿರುವ ಹೆತ್ತವರು ಅದನ್ನು ಫೇಸ್‌ಬುಕ್ ಲೈವ್ ಮೂಲಕ ನೋಡಬೇಕಾಯಿತು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.
ಕೊರೋನ ವೈರಸ್ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವಾಗ ಮಗನ ಶವದ ಜೊತೆಗೆ ಹೆತ್ತವರಿಗೆ ಕೇರಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಜೋಯಲ್ ಜಿ. ಜೋಮಯ್ ಎಪ್ರಿಲ್ 11ರಂದು 16ನೇ ವರ್ಷಕ್ಕೆ ಕಾಲಿಡುವವರಿದ್ದರು. ಆದರೆ, ಏಳು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ ಅವರು ಒಂದು ದಿನ ಮುಂಚೆ ದುಬೈಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಯುಎಇಯಲ್ಲಿರುವ ಹೆತ್ತವರು ಮತ್ತು ಇಬ್ಬರು ಸಹೋದರರು ತಮ್ಮ ಊರಾದ ಪತ್ತನಂತಿಟ್ಟದಲ್ಲಿ ಮೃತನ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಿದರು. ಆದರೆ, ಪ್ರಯಾಣ ನಿರ್ಬಂಧದ ಸಮಯದಲ್ಲಿ ಮೃತ ದೇಹವನ್ನು ಸಾಗಿಸುವುದು ಸುಲಭವಾಗಿರಲಿಲ್ಲ. ಸಾಮಾಜಿಕ ಕಾರ್ಯಕರ್ತರ ಪ್ರಯತ್ನಗಳ ಫಲವಾಗಿ ಸರಕು ವಿಮಾನದಲ್ಲಿ ಶವವನ್ನು ಸಾಗಿಸಲು ಯುಎಇ ಸರಕಾರ ಅನುಮತಿ ನೀಡಿದರೂ, ಕುಟುಂಬ ಸದಸ್ಯರ ಪ್ರಯಾಣಕ್ಕೆ ಅನುಮತಿ ನಿರಾಕರಿಸಿತು.