ಮಂಗಳೂರು, ಎ.17: ಸತತ 12 ದಿನಗಳಿಂದ ಯಾವುದೇ ಕೊರೋನ ಪಾಸಿಟಿವ್ ಪ್ರಕರಣಗಳಿಲ್ಲದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 12 ದಿನಗಳ ಬಳಿಕ ಮತ್ತೊಂದು ಕೊರೋನ ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಕೊರೋನ ದೃಢಪಟ್ಟ 13 ನೇ ಪ್ರಕರಣ ಇದಾಗಿದೆ.
ಉಪ್ಪಿನಂಗಡಿಯ 39 ವರ್ಷದ ವ್ಯಕ್ತಿ ಮಾರ್ಚ್ 28ರಂದು ದಿಲ್ಲಿಗೆ ಪ್ರಯಾಣ ಇತಿಹಾಸ ಹೊಂದಿದ್ದು, ಈಗಾಗಲೇ ಹೋಂ ಕ್ವಾರಂಟೈನ್ ನಲ್ಲಿದ್ದು, ಅವರ ಗಂಟಲ ದ್ರವದ ಪರೀಕ್ಷಾ ವರದಿ ಬಂದಿದ್ದು ಅದು ಪಾಸಿಟಿವ್ ಆಗಿದೆ. ಆದ್ದರಿಂದ ಅವರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಕೊರೋನ ದೃಢಪಟ್ಟು ಚಿಕಿತ್ಸೆಯಲ್ಲಿದ್ದ 13 ಮಂದಿಯ ಪೈಕಿ ಒಂಬತ್ತು ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕರ್ನಾಟಕದಲ್ಲಿ ಮಾರಕ ಕೊರೋನ ವೈರಸ್ ಅರ್ಭಟ ಮುಂದುವರೆದಿದ್ದು ಒಂದೇ ದಿನ ರಾಜ್ಯದಲ್ಲಿ ಸುಮಾರು 38 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 38 ಹೊಸ ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ. 38 ಮಂದಿ ಸೋಂಕಿತರ ಪೈಕಿ ಬೆಂಗಳೂರಿನಲ್ಲಿ 9, ಮಂಡ್ಯ 3, ಮೈಸೂರಿನಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 3, ಹೊಸಪೇಟೆ 7, ಬೀದರ್ 1, ದಕ್ಷಿಣ ಕನ್ನಡ 1,
ವಿಜಯಪುರದಲ್ಲಿ ಮತ್ತೆ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ.