ಬೆಂಗಳೂರು, ಎ.14: ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಮೇ 3ರ ವರೆಗೆ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಎರಡನೇ ಹಂತದ ಲಾಕ್ ಡೌನ್ ಕಠಿಣವಾಗಿರಲಿದೆ. ಬೆಂಗಳೂರಿಗೆ ಅರೆಸೇನಾ ಪಡೆ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಎಲ್ಲವನ್ನು ನಾವೇ ಕಂಟ್ರೋಲ್ ಮಾಡುತ್ತೇವೆ, ಬೆಂಗಳೂರಿಗೆ ಅರೆಸೇನಾ ಪಡೆ ಬರೋದಿಲ್ಲ ಎಂಬುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರಿನಲ್ಲಿ ಈಗಾಗಲೇ ಲಾಕ್ ಡೌನ್ ಬಗ್ಗೆ ಎಲ್ಲಾ ರೀತಿಯ ವ್ಯವಸ್ಥಿತ ಕ್ರಮವನ್ನು ಕೈಗೊಳ್ಳಲಾಗಿದೆ. ಕೊರೊನಾ ಸೋಂಕು ಹರಡದಂತೆ ಜನರು ರಸ್ತೆಗೆ ಇಳಿಯದಂತೆ ಎಲ್ಲೆಡೆ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರಿನ ಪಾದರಾಯನಪುರ ಮತ್ತು ಬಾಪೂಜಿನಗರವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಲಾಕ್ ಡೌನ್ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅರೆಸೇನಾ ಪಡೆ ಬರುವುದಿಲ್ಲ. ಎಲ್ಲವನ್ನೂ ನಾವೇ ಕಂಟ್ರೋಲ್ ಮಾಡ್ತೇವೆ. ನಾವೇ ಎಲ್ಲಾ ಭದ್ರತಾ ಕ್ರಮ ಕೈಗೊಂಡಿದ್ದೇವೆ ಎಂಬುದಾಗಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.