ಕೊರೋನ: ಅಮೆರಿಕದಲ್ಲಿ ಮತ್ತೆ 1,514 ಮಂದಿ ಸಾವು, 5.55 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ವಾಷಿಂಗ್ಟನ್, ಎ.13: ಕೊರೋನ ವೈರಸ್‌ ಸೋಂಕಿನಿಂದಾಗಿ ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 1,514 ಮಂದಿ ಸಾವಿಗೀಡಾಗಿರುವುದಾಗಿ ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಮಾಹಿತಿಗಳಿಂದ ತಿಳಿದು ಬಂದಿದೆ.

ಶನಿವಾರ ಅಮೆರಿಕದಲ್ಲಿ 1,920 ಮಂದಿ ಕೋವಿಡ್‌–19 ರೋಗಿಗಳು ಸಾವಿಗೀಡಾಗಿದ್ದರು. ಅಮೆರಿಕದ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿ 8:30ರ ವರೆಗೂ ಕೊರೋನ ವೈರಸ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22,020 ಮುಟ್ಟಿದೆ. ವಿಶ್ವದ ಯಾವುದೇ ರಾಷ್ಟ್ರಗಳಿಗಿಂತ ಅತ್ಯಧಿಕ ಸಾವು ಅಮೆರಿಕದಲ್ಲಿ ದಾಖಲಾಗಿದೆ.

ಕೋವಿಡ್‌–19 ಗಂಭೀರ ಪರಿಣಾಮ ಬೀರುತ್ತಿರುವುದರಿಂದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿಯೂ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದು, ತುರ್ತು ಕಾರ್ಯಾಚರಣೆಗಳಿಗಾಗಿ 50 ಸಾವಿರ ಯೋಧರನ್ನು ನಿಯೋಜಿಸಿದ್ದಾರೆ.

ಅಮೆರಿಕದಲ್ಲಿ ಸೋಂಕು ದೃಢಪಟ್ಟಿರುವ 24,718 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 5,55,313 ಜನರಿಗೆ ಸೋಂಕು ತಗುಲಿದೆ. ವಿಶ್ವದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ನ್ಯೂಯಾರ್ಕ್‌ ಕೊರೋನ ವೈರಾಣುವಿನ ಕೇಂದ್ರ ಸ್ಥಾನವಾಗಿ ಪರಿಣಮಿಸಿದೆ. ಇಲ್ಲಿ ಈಗಾಗಲೇ 9,566 ಮಂದಿ ಸತ್ತಿದ್ದರೆ, 1,88,694 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Also Read  ಮಂಗಳೂರು: ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಪೋಟ ➤ ಮೀನುಗಾರರ ರಕ್ಷಣೆ

ಜಗತ್ತಿನಾದ್ಯಂತ 18,54,654 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 1,14,358 ತಲುಪಿದೆ. ಈವರೆಗೆ 4,27,379 ಮಂದಿ ಗುಣಮುಖರಾಗಿದ್ದಾರೆ. ಇಟಲಿಯಲ್ಲೂ ಸಾವಿನಿ ಓಟ ಮುಂದುವರಿದಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 19,899 ಮುಟ್ಟಿದೆ. ಒಟ್ಟು ಕೊರೋನ ಸೋಂಕು ಪ್ರಕರಣಗಳು 1,56,363.

ಭಾರತದಲ್ಲಿ ರವಿವಾರದ ವರೆಗೂ ಕೊರೋನ ಸೋಂಕಿತರ ಒಟ್ಟಾರೆ ಸಂಖ್ಯೆ 8,447ಕ್ಕೆ ತಲುಪಿದೆ. 273 ಮಂದಿ ಸಾವಿಗೀಡಾಗಿದ್ದು, ಈವರೆಗೆ 716 ಮಂದಿ ಚೇತರಿಸಿಕೊಂಡಿದ್ದಾರೆ .

error: Content is protected !!
Scroll to Top