ಕೊರೋನಾ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿನ ವಿಳಂಬ, ಮತ್ತು ಲಾಕ್ ಡೌನ್ ಎಂಬ ಅನಿವಾರ್ಯತೆ!
ಎಲ್ಲೆಲ್ಲೂ ಕೊರೋನಾದ್ದೆ ಸುದ್ದಿ! ಹೌದು ನಮ್ಮ ಎಲ್ಲಾ ಮಾಧ್ಯಮಗಳು ಕೂಡಾ ಇದಕ್ಕೆ ಹೊರತಲ್ಲ. ಕೊರೋನಾ ವಿಷಯ ಬಿಟ್ಟು ಬರೆಯಲು ಬೇರೇನಿದೆ?. ಹೌದು ಎಲ್ಲರಿಗೂ ಒಮ್ಮೆ ಈ ಕೊರೋನಾ ಸಂಕಷ್ಟದಿಂದ ಹೊರಗೆ ಬಂದರೆ ಸಾಕು ಸಾಕೆನಿಸಿದೆ.
ಚೈನಾದ ‘ವುಹಾನ್’ ಎಂಬ ಪ್ರದೇಶದಲ್ಲಿ ಧುತ್ತನೇ ಕೆಲವರಿಗೆ ಅನಾರೋಗ್ಯವುಂಟಾದಾಗಿ, ಅವರನ್ನು ಪರೀಕ್ಷಿಸುವ ಸಂದರ್ಭದಲ್ಲಿ ಅಲ್ಲಿನ ಯಾವೊಂದು ನುರಿತ ವೈದ್ಯರಿಗೂ ಅರ್ಥೈಸಲಾಗದ ಆಶ್ಚರ್ಯಚಕಿತವಾಗಿರುವ ಕೆಲವು ರೋಗಾಣುಗಳು ಕಂಡು ಬಂದುವಲ್ಲದೇ ಆ ಮಾರಕ ರೋಗಾಣುಗಳು ಸೖಷ್ಟಿಸಿದ ಆ ರೋಗ ಕ್ರಮೇಣವಾಗಿ ಅಲ್ಲಿ ಹಲವರನ್ನು ಬಲಿಪಡೆಯುತ್ತಾ ಹೋಗಿ ಇಂದು ಅದು ವಿಶ್ವವ್ಯಾಪಿಯಾಗಿ ತನ್ನ ಕರಾಳ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಜನರನ್ನು ಈಗಾಗಲೇ ಬಲಿ ತೆಗೆದುಕೊಂಡಿವೆ ಮತ್ತು ಬಲಿ ತೆಗೆದುಕೊಳ್ಳುತ್ತಲೇ ಇದೆ. ಕೊರೋನಾ ಎಂಬ ರೋಗಾಣುಗಳ ರುದ್ರ ನರ್ತನ ವಿಶ್ವದ ಮೂಲೆ ಮೂಲೆಗೂ ಹಬ್ಬಿ ಮುಂದು ವರಿಯುತ್ತಲೇ ಇದೆ.
ಹೌದು ಈ ‘ಕೊರೋನಾ’ ನಮ್ಮ ದೇಶದಲ್ಲಿ ಹುಟ್ಟಿಕೊಂಡ ರೋಗಾಣುಗಳಂತೂ ಖಂಡಿತಾ ಅಲ್ಲವೇ ಅಲ್ಲ! ಸುಮಾರು ಎರಡು-ಮೂರು ತಿಂಗಳ ಹಿಂದೆ ಚೈನಾದಲ್ಲಿ ಅವತರಸಿ ಹಲವು ದೇಶಗಳನ್ನು ಕಂಗೆಡಿಸಿಯಾದ ಮೇಲೆ ನಮ್ಮ ದೇಶಕ್ಕೆ ಕಾಲಿರಿಸಿದೆ. ನಮ್ಮಲ್ಲಿ ಅವತರಿಸಿ ಎರಡು ಮೂರು ವಾರಗಳಾಗಿವೆ ಅಷ್ಟೇ.
ಹಾಗೆಯೇ ನಮ್ಮ ದೇಶದಲ್ಲೂ ಈಗಾಗಲೇ ಹಲವು ಜನರನ್ನು ಬಲಿತೆಗೆದುಕೊಂಡಿರುವ ಈ ಮಾರಕ ರೋಗ, ತನ್ನ ಕರಾಳತೆಯನ್ನು ಎಲ್ಲಿಯ ವರೆವಿಗೂ ಚಾಚಬಹುದೆಂಬ ನಿಖರ ಅಭಿಪ್ರಾಯ, ಮಾಹಿತಿ ನಮ್ಮ ದೇಶದ ಯಾವ ವಿಜ್ಞಾನಿಗಳಿಗೂ ಇಲ್ಲವಾಗಿದೆ.
ಈ ನಿಟ್ಟಿನಲ್ಲಿ ಹೇಳುವುದಾದರೆ “ಲಾಕ್ ಡೌನ್” ನಮ್ಮೆಲ್ಲರ ಇಂದಿನ ಅವಶ್ಯ, ಅಗತ್ಯತೆ ಮಾತ್ರವಲ್ಲ ನಾವೆಲ್ಲರೂ ನುಂಗಿ ನಡೆದುಕೊಳ್ಳಲೇ ಬೇಕಾಗಿ ಬಂದಿರುವ ಅನಿವಾರ್ಯತೆ!
ಈ ನಿಟ್ಟಿನಲ್ಲಿ ಇಂದು ನಾವು ಪ್ರತಿಯೊಬ್ಬನೂ ಜಾತಿಬೇಧ ಪಕ್ಷಬೇಧ ಬದಿಗೊತ್ತಿ ನಮ್ಮನ್ನು ನಾವೇ ರಕ್ಷಿಸಿ ಅಳವಡಿಸಿಕೊಳ್ಳ ಬೇಕಾಗಿರುವ ಸರಳ ಮತ್ತು ಅನಿವಾರ್ಯ ಪ್ರಕ್ರಿಯೆಯೇ ಈ ‘ಲಾಕ್ ಡೌನ್’. ಇಲ್ಲಿ ನಾವು ಚಿಂತಿಸಲೇ ಬೇಕಾಗಿ ಬಂದಿರುವ ಅಂಶವೆಂದರೆ, ಅಷ್ಟೊಂದು ತುರಾತುರಿಯಲ್ಲಿ ಅಂದರೆ ಕೆಲವೇ ಕೆಲವು ಘಂಟೆಗಳ ಮುನ್ಸೂಚನೆ ನೀಡಿ ಈ ‘ಲಾಕ್ ಡೌನ್’ ಘೋಷಿಸಲೇ ಬೇಕಾದ ಅನಿವಾರ್ಯತೆ ನಮ್ಮ ದೇಶಕ್ಕೆ ಇತ್ತೇ ? ಹಾಗೂ ಈ ಲಾಕ್ ಡೌನ್ ಗೆ ಮುಂಚಿತವಾಗಿ ದೇಶದ ಪ್ರಜೆಗಳ ಮೂಲಭೂತ ಅವಶ್ಯಕತೆ ಸರಬರಾಜು ಸಮಸ್ಯೆ ತಪ್ಪಿಸಲು ಯಾವೆಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು ? ಎಂಬುದು.
ನಮ್ಮದೇ ದೇಶದ ವಿರೋಧ ಪಕ್ಷದ ನಾಯಕರೊಬ್ಬರು ಫೆಬ್ರವರಿ ತಿಂಗಳ 12ನೇ ತಾರೀಖಿನಂದೇ ಈ ಕೊರೋನಾ ಮಹಾಮಾರಿಯ ಬಗ್ಗೆ ಇಡೀ ದೇಶವನ್ನೇ ಜ್ಞಾಪಿಸಿದ್ದರು. ಕೋರೋನಾ ದೇಶಕ್ಕೆ “ಆರೋಗ್ಯ ಮತ್ತು ಹಣಕಾಸಿನ ತುರ್ತು ಪರಿಸ್ಥಿತಿ” ಯನ್ನೇ ಸೖಷ್ಠಿಸೀತು ಅಂತ ನಮ್ಮ ನಾಯಕರನ್ನು ಎಚ್ಚರಿಸಿದ್ದರು. ಆದರೆ ಅಮೇರಿಕಾ ದೇಶದ ಪ್ರಧಾನಿ ಟ್ರಂಪ್ ನ ಭಾರತ ಭೇಟಿ ಹಾಗೂ ಮಧ್ಯಪ್ರದೇಶದಲ್ಲಿ ನಡೆ(ಸಿ)ದ ಬಿಕ್ಕಟ್ಟಿನ ನಡುವೆ ನಮಗೆ ಕೊರೋನಾ ಬಗ್ಗೆ ಚಿಂತಿಸಲು ಕೂಡಾ ಸಮಯಾವಕಾಶವಿರಲಿಲ್ಲ!! ವಿಪರ್ಯಾಸವೆಂದರೆ ಕರ್ನಾಟಕದ ಸಂಸದರೊಬ್ಬರು ತನ್ನ ಟ್ವಿಟರ್ ಖಾತೆಯಲ್ಲಿ ಕೊರೋನಾ ಬಗ್ಗೆ ಎಚ್ಚರಿಸಿದ ಆ ವಿರೋಧ ಪಕ್ಷದ ನಾಯಕರನ್ನೇ “ಸೈಕೋ” ಎಂದು ಲೇವಡಿ ಕೂಡಾ ಮಾಡಿದ್ದರು. ಇವರುಗಳೆಲ್ಲರ ವೈಫಲ್ಯತೆ, ವಿಳಂಬ ನೀತಿ, ಮತ್ತು ಪರಿಸ್ಥಿತಿಯನ್ನು ಅರ್ಥೈಸುವಿಕೆಯಲ್ಲಿನ ಕ್ಷಮತೆಯ ಕೊರತೆ ಇಂದು ದೇಶದ ಪ್ರಜೆಗಳೆಲ್ಲರೂ ಈ ರೀತಿ ಅನುಭವಿಸಲೇಬೇಕಾದ ಒಂದು ರೀತಿಯ ತುರ್ತು ಅನಿವಾರ್ಯ ಪರಿಸ್ಥಿತಿಗೆ ತಂದೊಡ್ಡಿರುವುದಂತೂ ನಿಜ!. ನಿಜ ಹೇಳಬೇಕೆಂದರೆ ನಾವು ಎಚ್ಚೆತ್ತಿದ್ದೇ ಮಾರ್ಚ್ ಎರಡನೇ ಅಥವಾ ಮೂರನೇ ವಾರದಲ್ಲಿ. ಅಷ್ಟರಲ್ಲಿ ಕೊರೋನಾ ದೇಶದೆಲ್ಲೆಡೆ ತನ್ನ ಕರಾಳ ಹಸ್ತ ಚಾಚಿ ತನ್ನ ರುದ್ರ ನರ್ತನ ಆರಂಭಿಸಿಯೇ ಬಿಟ್ಟಿತ್ತು.!
ಕೊರೋನಾ ಭಾರತಕ್ಕೆ ಕಾಲಿಡದಂತೆ ಮಾಡುವ ಎಲ್ಲ ಅವಕಾಶಗಳೂ ನಮ್ಮಲಿತ್ತು. ಈಗಿನ ಕೊರೋನಾ ಸೋಂಕಿತರ ಪ್ರಯಾಣ – ಪುರಾವೆ ಕೇಸ್ ಹಿಸ್ಟರಿಗಳನ್ನು ಅವಲೋಕಿಸಿದರೆ, ಇತ್ತೀಚೆಗೆ ವಿದೇಶದಿಂದ ಬಂದವರಿಗೆ ಮತ್ತು ಬಂದವರ ಮೂಲಕ ಈ ರೋಗ ಹರಡಿದೆ, ಸುತ್ತ – ಮುತ್ತ ಹರಡುತ್ತಲಿವೆ. ಹೀಗಿದ್ದೂ ಕ್ಲಪ್ತ ಸಮಯದಲ್ಲಿ ಎಲ್ಲಾ ವಿಮಾನ ವಿಲ್ದಾಣಗಳಲ್ಲಿ ಲಾಕ್ ಡೌನ್ ಮಾದರಿಯ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದರೆ ಮತ್ತು ವಿದೇಶದಿಂದ ಬರುವ ಹಾಗೂ ವಿದೇಶಕ್ಕೆ ತೆರಳುವ ಮಂದಿಗಳಿಗೆ ಅಗತ್ಯ ನಿಯಂತ್ರಣ ಹೇರಿ, ವೈದ್ಯಕೀಯ ಪರೀಕ್ಷೆ ತಪಾಸಣೆ ಮತ್ತು ಸುಶ್ರೂಷೆ ಕ್ರಮ ಜರುಗಿಸಿದ್ದಿದ್ದರೆ ಹಾಗೂ ವಿಮಾನ ನಿಲ್ದಾಣದಲ್ಲಿಯೇ ಈ ಮೊದಲೇ ಸಂಪೂರ್ಣ ಲಾಕ್ ಡೌನ್ ಪರಿಸ್ಥಿತಿ ತಂದು ಎಲ್ಲ ರೀತಿಯ ಮೂಲ ಭೂತ ಅವಶ್ಯ ಕ್ರಮ ಕೈಗೊಂಡು, ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿದ್ದಿದ್ದರೆ ಇಂತಹ ಕಠಿಣ ಪರಿಸ್ಥಿತಿ ಎದುರಾಗಿರುತ್ತಿರಲ್ಲ ಅನ್ನಿಸುತ್ತಿದೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವಾಗಲೂ ಅನುಸರಿಸಲೇಬೇಕಾದ ಕೆಲವು ನಿಯಮಾವಳಿ ಇರುತ್ತವೆ. ಆದರೆ ಈ ಲಾಕ್ ಡೌನ್ ಘೋಷಿಸುವಾಗ ಅದ್ಯಾವುದೂ ಇಲ್ಲದೇ ಹೋಯ್ತು ಅಂತಲೂ ಕಾಣುತ್ತದೆ. ಇಂದಿನ ದಿನಗಳಲ್ಲಿ ಕಾಲು ನಡಿಗೆಯಲ್ಲಿ ಸಾಗುತ್ತಿರುವ ನಿರ್ಗತಿಕರಾಗಿರುವ ಕೂಲಿಕಾರ್ಮಿಕರ, ಅಮಾಯಕ ಬಡವರ ಬವಣೆಗಳನ್ನಾಗಲೀ ನಮ್ಮಂತಹ ಕೆಳ ಮಧ್ಯಮವರ್ಗದ ಜನರ ಕಷ್ಟ ನಷ್ಟಗಳನ್ನು ಯಾರಾದರೂ ಚಿಂತಿಸಿದ್ದಾರೆಯೇ?! ನಮ್ಮಿಂದಲೇ ಸಹಾಯಧನ ಅಪೇಕ್ಷಿಸುವ ನಾಯಕರಲ್ಲಿ ನನ್ನ ಪ್ರಶ್ನೆ ಹೀಗೇ ಏಕಾಏಕಿ ತಂದಿರುವ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮಲ್ಲಿ ಅನಿವಾರ್ಯ ಅವಶ್ಯಕತೆಗಳಿಗೆ ಹಣವಿರಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ? ಈ ನಿಟ್ಟಿನಲ್ಲಿ ಮೂಲಭೂತ ಅವಶ್ಯಕತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದ ಹೊರತು ನಾವು ಬಾಲ್ಕನಿಯಲ್ಲಿ ನಿಂತು ಅದೆಷ್ಟು ಘಂಟೆ ಹೊಡೆದರೂ, ಇದ್ದ ಬೆಳಕನ್ನು ತೆಗೆದು ಟಾರ್ಚ್, ಮೊಬೈಲ್ ಬೆಳಕನ್ನು ಹರಿಸಿದರೂ ಪ್ರಯೋಜನವಾಗಲಾರದು!. ದೇಶ ಈಗಾಗಲೇ ಹತ್ತು ವರುಷ ಹಿಂದೆ ಸಾಗಿಯಾಗಿದೆ.
ನಾವು ಈ ಸಂದರ್ಭದಲ್ಲಿ ನಮಗಾಗಿ ದಿನ, ರಾತ್ರಿ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿರುವ ವೈದ್ಯರ, ದಾದಿಯರ ಸೇವೆಯನ್ನು ಎಷ್ಟು ಹೊಗಳಿದರೂ ಸಾಲದು! ನಾವು ಇವರ ಬಗ್ಗೆ ಎಷ್ಟೇ ಚಿರಋಣಿಗಳಾಗಿದ್ದರೂ ಸಾಲದು!. ಹಾಗೇ ಬಹುತೇಕ ಪೋಲೀಸರ ನಿಸ್ವಾರ್ಥ ಸೇವೆಯನ್ನೂ ಸಹಾ. ಆದರೂ ಇವರಲ್ಲಿ ಹಲವರ ‘ಅವಮಾನವೀಯತೆ’ ಯನ್ನೂ ನಾವು ಖಂಡಿಸಲೇಬೇಕಾಗಿದೆ.
ಏನೇ ಇರಲಿ ಆಗಿದ್ದು ಆಗಿ ಹೋಗಿದೆ. ಆದರೆ ಎಲ್ಲ ಸದ್ಯಕ್ಕೆ ಬದಿಗೊತ್ತಿ ನಾವಿಂದು ಎಲ್ಲರೂ ಕೈಜೋಡಿಸಲೇ ಬೇಕಾಗಿರುವುದು ನಾವು ನಮ್ಮ ಸರಕಾರ ಮಾಡುವ ಎಲ್ಲಾ ಆದೇಶಗಳ ಪಾಲನೆ ಹಾಗೂ ಇದಕ್ಕೆ ಸಂಪೂರ್ಣ ಸಹಕರಿಸುವುದು. ಇದಿಲ್ಲದೇ ಹೋದಲ್ಲಿ ಇಂದಿನ ಈ ಪರಿಸ್ಥಿತಿ ಎಷ್ಟು ಬಿಗಡಾಯಿಸೀತು ಎಂಬುದನ್ನು ಯಾರಿಂದಲೂ ಊಹಿಸಲು ಸಾದ್ಯವಾಗಲಾರದು.
ಕೊರೋನಾ ಎಂಬ ಮಾರಿ ನಮ್ಮ ದೇಶದಿಂದಲೇ ದೂರವಾಗಲಿ, ಸರ್ವೇ ಜನ ಸುಖಿನೋ ಭವಂತು.
(ಅನವಶ್ಯ ತರಲೆ ಮತ್ತು ಇತರರೆಡೆ ಬೆರಳು ತೋರಿಸಿ ವಾಸ್ತವತೆಯನ್ನು ಮರೆಮಾಚಿಲೆತ್ನಿಸುವ ಪ್ರತಿಕ್ರಿಯೆಗಳಿಗೆ ಉತ್ತರಿಸಲಾಗುವುದಿಲ್ಲ. ಮೌಲ್ಯಾಧಾರಿತ ಪ್ರತಿಕ್ರಿಯೆಗೆ ಸ್ವಾಗತ)
✍? ಪ್ರವೀಣ್ ಕಟ್ಟೆ, ವಕೀಲರು