ಕಾಸರಗೋಡು, ಎ.9: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ತಲಪಾಡಿಯ ಮೂಲಕ ಮಂಗಳೂರಿಗೆ ಕೇರಳದವರಿಗೆ ಚಿಕಿತ್ಸೆಗೆ ತೆರಳಲಾಗದೆ ಕಠಿಣ ಸಂದರ್ಭ ಉಂಟಾಗಿದ್ದು, ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೇರಳದಲ್ಲೇ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಸೂಕ್ತ ಆಸ್ಪತ್ರೆಯಿಲ್ಲದ ಹಿನ್ನೆಲೆಯಲ್ಲಿ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರಿಗೆ ತೆರಳಿದರೂ ಸೂಕ್ತ ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.
ಗುರುವಾರ ಕೂಡಾ ಕೇರಳದ ಓರ್ವ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳದಲ್ಲೇ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು. ಅಗತ್ಯ ಬಿದ್ದಲ್ಲಿ ಏರ್ ಅಂಬ್ಯುಲೆನ್ಸ್ ಅಥವಾ ಹೆಲಿಕಾಪ್ಟರ್ ಸೇವೆ ಬಳಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.