ಬೆಂಗಳೂರು, ಎ.9: ಈವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೇ ಎನ್ನುವ ಬಗ್ಗೆ ನಾಳೆ ತೀರ್ಮಾನ ಮಾಡಲಾಗುವುದು. ಸಂಪುಟ ಸಹೋದ್ಯೋಗಿಗಳು 15 ದಿನ ಲಾಕ್‌ಡೌನ್ ವಿಸ್ತರಣೆಗೆ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಹೋದ್ಯೋಗಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದೇನೆ. ಲಾಕ್‌ಡೌನ್ ಮುಂದುವರಿಸಬೇಕು ಎಂಬುದು ಬಹುತೇಕ ಸಚಿವರ ಅಭಿಪ್ರಾಯವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಇಂದು ಸಂಜೆಯ ಒಳಗೆ ಪ್ರಕಟಿಸಲಾಗುತ್ತದೆ. ಈ ತೀರ್ಮಾನ ಕೊರೊನಾ ಸೋಂಕು ತಡೆ ಕಾರ್ಯಾಚರಣೆಗೆ ಮತ್ತು ಸಂಕಷ್ಟ ಪರಿಸ್ಥಿತಿ ನಿರ್ವಹಣೆಗೆ ನೆರವಾಗುವ ಸಲುವಾಗಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಘೋಷಿಸಿದಂತೆ ಎಪ್ರಿಲ್ 14ರಂದು ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಇರುತ್ತದೆ. ಈ ಕುರಿತಾಗಿ ಯಾವುದೇ ಅನುಮಾನ ಬೇಡ. ಅನಗತ್ಯವಾಗಿ ಬೀದಿಗೆ ಬರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.
ಬೆಂಗಳೂರಿನಲ್ಲಿ ಅನಗತ್ಯವಾಗಿ ಮನೆಯಿಂದ ಹೊರಗೆ ಬಂದ 10 ಸಾವಿರ ವಾಹನಗಳನ್ನು 10 ಸಾವಿರ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ರೋಗ ನಿಯಂತ್ರಣಕ್ಕೆ ಬರಬೇಕು, ಪರಿಸ್ಥಿತಿ ಸುಧಾರಿಸಬೇಕು ಎಂಬ ನಿಟ್ಟಿನಲ್ಲಿ ಜನರು ಮನೆಯಲ್ಲಿರುವುದು ಅನಿವಾರ್ಯ. ನಿಮಗೆ ಕೈ ಮುಗಿದು ಕೇಳುತ್ತೇನೆ. ಮನೆಯಲ್ಲಿಯೇ ಇರಿ, ಹೊರಗೆ ಬರಬೇಡಿ. ದಯವಿಟ್ಟು ಸಹಕರಿಸಿ ಎಂದು ವಿನಂತಿ ಮಾಡಿಕೊಂಡರು.
ರಾಜ್ಯದ ಯಾವುದೇ ಭಾಗದಲ್ಲಿ ಯಾರೂ ಕೂಡಾ ಹಸಿವಿನಿಂದ ಇರಬಾರದು. ಬೆಂಗಳೂರು ಸೇರಿದಂತೆ ಎಲ್ಲೆಡೆ ಪಡಿತರ ಮತ್ತು ಆಹಾರ ವಿತರಣೆಗೆ ಸಚಿವರು, ಶಾಸಕರು ಜವಾಬ್ದಾರಿ ಹೊತ್ತಿದ್ದಾರೆ. ಶೀಘ್ರವಾಗಿ ಕೇಂದ್ರದಿಂದಲ್ಲೂ ಪಡಿತರ ಬರಲಿದೆ. ಅದನ್ನು ವಿತರಿಸಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಕೆಲವರು ತಮ್ಮ ಬಳಿ ಪಡಿತರಚೀಟಿ ಇಲ್ಲ ಎಂದಿದ್ದಾರೆ. ಅವರಿಗೂ ಹಂಗಾಮಿಯಾಗಿ ವ್ಯವಸ್ಥೆ ಮಾಡಿ ಪಡಿತರ ವಿತರಿಸುವಂತೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದ ವಿವಿಧೆಡೆ ಮಳೆ ಶುರುವಾಗಿದೆ. ರೈತರು ಆತಂಕ ಪಡಬೇಕಾಗಿಲ್ಲ. ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಸಾಕಷ್ಟು ಇದೆ. ಬೆಳೆನಾಶವಾಗಿ ತೊಂದರೆಯಾಗಿದ್ದಲ್ಲಿ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.