-
ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗೆ ಜಿಲ್ಲಾಡಳಿತದಿಂದ ಬೀಗ
ಕಲಬುರಗಿ, ಎ.8: ರಾಜ್ಯದಲ್ಲಿ ಕೋವಿಡ್-19 ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಕಲಬುರಗಿಯ 65 ವರ್ಷದ ಸೋಂಕಿತ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಈ ಮೂಲಕ ಕಲಬುರಗಿಯಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದೆ. ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ.
ರಾಜ್ಯದಲ್ಲಿ ಮತ್ತೆ 6 ಕೊರೋನ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಮಾರಕ ಸೋಂಕು ತಗುಲಿದವರ ಸಂಖ್ಯೆ 181ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಭೀತಿ ತಂದೊಡ್ಡಿದೆ.
ಕಲಬುರಗಿ ಮೂಲದ 65 ವರ್ಷದ ವೃದ್ಧರೊಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿಗೆ ಬಲಿಯಾದ ವ್ಯಕ್ತಿಗೆ ಯಾವುದೇ ಪ್ರಯಾಣದ ಹಿಸ್ಟರಿ ಇಲ್ಲ. ಇದರೊಂದಿಗೆ ಅವರು ಸೋಂಕು ಪೀಡಿತರೊಂದಿಗೆ ಯಾವುದೇ ಸಂಪರ್ಕ ಕೂಡ ಹೊಂದಿಲ್ಲ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಇವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೋನ ಲಕ್ಷಣ ಹಿನ್ನೆಲೆಯಲ್ಲಿ ಮಂಗಳವಾರವಷ್ಟೇ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ನಿನ್ನೆ ರಕ್ತದ ಮಾದರಿ ಹಾಗೂ ಗಂಟಲು ದ್ರವದ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಕೊರೋನ ಪಾಸಿಟಿವ್ ಬಂದಿತ್ತು. ಆದರೆ, ಕಳೆದ ರಾತ್ರಿ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ವೃದ್ಧ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯನ್ನು ಬಂದ್ ಮಾಡಿದ್ದು, ಚಿಕಿತ್ಸೆ ನೀಡಿದ ವೈದ್ಯ, ವೃದ್ಧನ ಕುಟುಂಬ ವರ್ಗ ಹಾಗೂ ಸಂಪರ್ಕದಲ್ಲಿದ್ದ ಎಲ್ಲರನ್ನು ತಪಾಸಣೆ ನಡೆಸಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಖಾಸಗಿ ಆಸ್ಪತ್ರೆ ಸೀಝ್: ಸಾವಿಗೂ ಮುನ್ನ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯನ್ನು ಜಿಲ್ಲಾಡಳಿತ ಸೀಝ್‌ಮಾಡಿದೆ. ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ವ್ಯಕ್ತಿಗೆ ಕೊರೋನ ಲಕ್ಷಣಗಳು ಕಂಡು ಬಂದರೂ ಆಸ್ಪತ್ರೆಯವರು ಜಿಲ್ಲಾಡಳಿತದ ಗಮನಕ್ಕೆ ತಂದಿರಲಿಲ್ಲ ಎಂದು ಆರೋಪಿಸಲಾಗಿದೆ.