ಕರಾವಳಿ ಕಾವಲು ಪಡೆಯಿಂದ ಕಡಲ ದಾರಿಯಾಗಿ ನುಸುಳುವಿಕೆಗೆ ಕಟ್ಟೆಚ್ಚರ

ಮಂಗಳೂರು, ಎ.8: ಕಾಸರಗೋಡು- ಕರ್ನಾಟಕ ಸಂಪರ್ಕಿಸುವ ರಸ್ತೆ ಬಂದ್ ಮಾಡಿದ ಕಾರಣದಿಂದ, ಕೆಲವರು ಕಡಲ ಕಿನಾರೆಯ ಮೂಲಕ ಅಕ್ರಮವಾಗಿ ದ.ಕ. ಜಿಲ್ಲೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಈಗ ಕರಾವಳಿ ಕಾವಲು ಪೊಲೀಸ್ ಪಡೆ ಕಡಲ ಕಿನಾರೆಯಲ್ಲಿ ಹದ್ದಿನ ಕಣ್ಣಿರಿಸಿದೆ.

ಕಾಸರಗೋಡಿನ ಕೋವಿಡ್ 19 ಸೋಂಕಿತರ ಸಂಪರ್ಕದಲ್ಲಿರುವ ಬಹುತೇಕ ಮಂದಿ ಗಡಿ ಭಾಗದಲ್ಲಿಯೇ ಇರುವ ಕಾರಣದಿಂದ ಅವರು ಕಡಲ ಕಿನಾರೆಯ ಮೂಲಕವೂ ದ.ಕ. ಜಿಲ್ಲೆ ಪ್ರವೇಶಿಸುವ ಸಾಧ್ಯತೆಯಿದೆ ಎಂಬ ಸುಳಿವಿನ ಆಧಾರದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ. ಜತೆಗೆ ಈ ಭಾಗದಲ್ಲಿ ಮರಳುಗಾರಿಕೆ ನಡೆಸುತ್ತಿರುವ ದೋಣಿಯ ಸಹಾಯದಿಂದಲೂ ದ.ಕ. ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆಯೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕಾಸರಗೋಡು-ಮಂಗಳೂರು ನಡುವಿನ ರಸ್ತೆ ಗಡಿ ಬಂದ್‌ನಲ್ಲಿ ಕೊಂಚ ಬದಲಾವಣೆಯಾಗಿದ್ದು, ತುರ್ತು ಸೇವೆಗಳ ವಾಹನ ಓಡಾಟಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ. ಆದರೆ ಬೇರೆಲ್ಲ ಗಡಿಗಳನ್ನು ಬಂದ್ ಮಾಡಿ ವಲಸೆ ತಡೆಯುವಂತೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಆಯಾ ಸರಕಾರಗಳಿಗೆ ಸೂಚಿಸಿವೆ. ಇದರಂತೆ ರಾಜ್ಯ ಸರಕಾರವು ಎಲ್ಲ ಗಡಿ ಬಂದ್ ಮಾಡಿತ್ತು. ಇಷ್ಟಿದ್ದರೂ ನದಿ, ಕಡಲ ಕಿನಾರೆ ಮೂಲಕವೂ ಕೆಲವರು ದ.ಕ. ಪ್ರವೇಶಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ನದಿ, ಕಡಲ ಕಿನಾರೆ ವ್ಯಾಪ್ತಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದೆ. ಎಲ್ಲರ ಚಲನವಲನದ ಮೇಲೆ ಕಣ್ಣಿಟ್ಟಿದೆ.

Also Read  ಮಂಗಳೂರು: ಭೀಕರ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿನಿ ಬಲಿ ➤ ನಜ್ಜುಗುಜ್ಜಾದ ಸ್ಕಾರ್ಪಿಯೋ ಕಾರು

ನದಿ ಕಿನಾರೆಯಿಂದ ನುಸುಳುವಿಕೆ: ಕೇರಳ ಗಡಿ ಭಾಗದ ಉದ್ಯಾವರ ಬೀಚ್‌ನಲ್ಲಿ ಮೀನು ಮಾರಾಟ ನಡೆಯುತ್ತಿದೆ. ಸಮೀಪದ ಕಣ್ವತೀರ್ಥ ನದಿ ಕಿನಾರೆಯಿಂದ ತಲಪಾಡಿ ಗಡಿ ಪ್ರವೇಶಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ದೂರವಿದೆ. ಹಾಗಾಗಿ ಇಲ್ಲಿಂದ ತಲಪಾಡಿ ರಸ್ತೆ ಮೂಲಕ ಅಥವಾ ನದಿ ತಾಣದ ಮೂಲಕ ದ.ಕ. ಜಿಲ್ಲೆಯ ಗಡಿ ಪ್ರವೇಶಿಸುವ ಸಾಧ್ಯತೆಯಿದೆ. ತಲಪಾಡಿ ಸಮೀಪದ ಉಚ್ಚಿಲ ಭಟ್ರಪಾಡಿ ನದಿ ಕಿನಾರೆ ಕೂಡ ಕೇರಳಿಗರ ಪ್ರವೇಶಕ್ಕೆ ಸುಲಭದ ದಾರಿಯಾಗಿದೆ. ಇಲ್ಲಿಯೂ ನದಿ ನೀರಿನಲ್ಲಿ ಗಡಿ ದಾಟಿ ಹಲವು ಜನರು ಬರುತ್ತಿದ್ದಾರೆ ಎಂಬ ಆರೋಪವಿದೆ.

error: Content is protected !!
Scroll to Top