ಬೆಂಗಳೂರು, ಎ.2 ರಾಜ್ಯದಲ್ಲಿನ 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಿಲ್ಲ. ಈ ವರ್ಷ ಎಲ್ಲರನ್ನೂ ಪಾಸ್ ಮಾಡಲಾಗುತ್ತದೆ. ಆದ್ರೇ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎಪ್ರಿಲ್ 14ರ ಬಳಿಕ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ಫೇಸ್ ಬುಕ್ ನಲ್ಲಿ ಲೈವ್ ಮೂಲಕ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆಯಲ್ಲಿ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬಳಿಕ 7ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಯಿತು. ಹೀಗಾಗಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಇಲ್ಲದಂತೆ ಈ ವರ್ಷ ಪಾಸ್ ಮಾಡಲಾಗುತ್ತದೆ ಎಂದು ತಿಳಿಸಿದರು.
7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಅವರು ಈ ಹಿಂದಿನ ತರಗತಿಯ ಪರೀಕ್ಷಾ ಅಂಕಗಳ ಆಧಾರದ ಮೇಲೆ ಪಾಸ್ ಮಾಡಲಾಗುತ್ತದೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ನಡೆಸಲಾಗಿರುವಂತ ಗುಣಾತ್ಮಕ ಮತ್ತು ರೂಪಣಾತ್ಮಕ ಪರೀಕ್ಷೆಯ ಆಧಾರದ ಮೇಲೆ ಪಾಸ್ ಮಾಡಲಾಗುತ್ತದೆ. ಒಂದು ವೇಳೆ ಫೇಲ್ ಆದರೂ ಶಿಕ್ಷಕರು ಅಂತಹ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ, ಪಾಸ್ ಮಾಡಲು ಸೂಚಿಸಲಾಗಿದೆ ಎಂದರು.
ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎಪ್ರಿಲ್ 14ರ ನಂತರ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಒಳಗಾಗಬಾರದು. ಪರೀಕ್ಷೆ ಇಲ್ಲ ಅಂತ ಯಾವುದೇ ವಿದ್ಯಾರ್ಥಿಗಳು ಹೊರಗೆ ಬರಬಾರದು. ಮನೆಯಲ್ಲಿಯೇ ಕುಳಿತುಕೊಂಡು ಬೇರೆ ವಿಷಯಗಳನ್ನು ಕಲಿಯುವಂತೆ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.