ಬೆಂಗಳೂರು, ಮಾ.31: ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಮಾಸ್ಕ್ ಧರಿಸುವಂತೆ ಅನೇಕರು ಸಾರ್ವಜನಿಕರಿಗೆ ಒತ್ತಾಯ ಹೇರಲಾಗುತ್ತಿದೆ. ಆದರೆ ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಯಾರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರಷ್ಟೇ ಮಾಸ್ಕ್ ಧರಿಸಿದರೆ ಸಾಕು ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
ಈ ಕುರಿತಂತೆ ಸೂಚನೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ರಾಜ್ಯದ ಅನೇಕ ಅಂಗಡಿ, ಶಾಪ್ ಸೇರಿದಂತೆ ಇತರೆಡೆ ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸೂಚನೆ ಹೊರಡಿಸಲಾಗಿದೆ.
ಅದರಂತೆ ಆರೋಗ್ಯವಂತರು ಯಾರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಇದರ ಹೊರತಾಗಿ ಜ್ವರ, ನೆಗಡಿ, ಶೀತ ಸೇರಿದಂತೆ ಇತರೆ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳು ಮಾತ್ರವೇ ಮಾಸ್ಕ್ ಧರಿಸಬೇಕು ಎಂಬುದಾಗಿ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.
ಇದಲ್ಲದೇ ಕೊರೋನ ಸೋಂಕು ದೃಢಪಟ್ಟವರು, ಕೊರೋನ ಸೋಂಕಿನ ಶಂಕಿತ ವ್ಯಕ್ತಿಗಳು ಹಾಗೂ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾತ್ರವೇ ಮಾಸ್ಕ್ ಧರಿಸಿದರೆ ಸಾಕು ಎಂಬುದಾಗಿ ಸಲಹೆ ನೀಡಿದೆ.
ಇನ್ನೂ ಕೊರೋನ ಸೋಂಕಿನ ಶಂಕಿತರು, ಸೋಂಕಿತರು, ಇವರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಎನ್95 ಮಾಸ್ಕ್ ಧರಿಸಬೇಕು. ಇವರ ಹೊರತಾಗಿ ಆರೋಗ್ಯವಂತರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಹೀಗಿದ್ದೂ ಮಾಸ್ಕ್ ಧರಿಸುವುದಾದರೇ ಸರ್ಜಿಕಲ್ ಮಾಸ್ಕ್, ತ್ರಿ ಲೇಯರ್ ಮಾಸ್ಕ್ ಧರಿಸಿ ಸಾಕು ಎಂಬುದಾಗಿ ಸೂಚನೆ ನೀಡಿದ್ದಾರೆ.