ಬೆಂಗಳೂರು, ಮಾ.26: ಪ್ರಧಾನಿಯವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಸಮಾಲೋಚಿಸಿದ ಅವರು, ಲಾಕ್ ಡೌನ್ ಮೀರಿ ಹೊರಬರುವವರನ್ನು ಬಂಧಿಸುವಂತೆ ಸೂಚನೆ ನೀಡಿದರು.
ಎಲ್ಲಾ ಜಿಲ್ಲೆಯ ಬಾರ್ಡರ್‌ಗಳನ್ನು ಸೀಲ್ ಮಾಡಬೇಕು. ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಲಾಯಿತು. ಈಗಾಗಲೇ ಡಿಸ್ಟಲರಿ ಕಂಪನಿಗಳ ಜೊತೆ ಸ್ಯಾನಿಟೈಸರ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದ್ದು, ಕೆಲವು ಕಂಪೆನಿಗಳ ಉಚಿತವಾಗಿ ನೀಡಲು ಮುಂದೆ ಬಂದಿವೆ. ಅದರ ಸದಾವಕಾಶ ಬಳಸಿಕೊಳ್ಳಲು ಸೂಚನೆ ನೀಡಿದರು.
ರಾಜ್ಯದಲ್ಲಿ ಯಾವುದೇ ಖಾಸಗಿ ಕ್ಲಿನಿಕ್‌ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಆದೇಶಿಸಿದರು. ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೊರೋನಕ್ಕಾಗಿ ಮೀಸಲಿಡುವಂತೆ ಸೂಚನೆ ನೀಡಲಾಯಿತು. ವೈದ್ಯರು ಮತ್ತು ನರ್ಸ್‌ಗಳಿಗೆ ತೊಂದರೆ ಕೊಡುವ ಮನೆ ಮಾಲಕರಿಗೆ ಎಚ್ಚರಿಕೆ ನೀಡಬೇಕು ಎಂದು ಸಿಎಂ ಸೂಚಿಸಿದರು.