ಸಂಪೂರ್ಣ ಕೊರೋನ ಚಿಕಿತ್ಸಾ ಆಸ್ಪತ್ರೆಯಾಗಿ ವೆನ್ಲಾಕ್ ಪರಿವರ್ತನೆ: ಸಚಿವ ಕೋಟ

ಮಂಗಳೂರು, ಮಾ.26: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೋನ ಚಿಕಿತ್ಸಾ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ಕೊರೋನ ಸೋಂಕಿನ ಮುಂಜಾಗ್ರತೆ ಕ್ರಮಗಳ ಬಗ್ಗೆ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಮತ್ತು ವೈದ್ಯರುಗಳೊಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚರ್ಚಿಸಿ ಈ ಬಗ್ಗೆ ಮಾಹಿತಿ ನೀಡಿದರು.

ವೆನ್ಲಾಕ್ ಆಸ್ಪತ್ರೆಯ 20 ಹಾಸಿಗೆಗಳ ಆಯುಷ್ ಕಟ್ಟಡದಲ್ಲಿ ಕೊರೋನ ಶಂಕಿತರನ್ನು ದಾಖಲಿಸಿಲಾಗುತ್ತದೆ. ಅವರಲ್ಲಿ ಯಾರಿಗಾದರೂ ಪಾಸಿಟಿವ್ ಕಂಡು ಬಂದಲ್ಲಿ ಅವರನ್ನು ಸೂಪರ್ ಸ್ಪೆಶಾಲಿಟಿ ಕಟ್ಟಡದ ವಾರ್ಡಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಹಾಗೆಯೇ ಈಗಾಗಲೇ ಆಸ್ಪತ್ರೆಯಲ್ಲಿ ಬೇರೆ ಕಾಯಿಲೆಗಳ ಚಿಕಿತ್ಸೆ ಪಡೆಯಲು ಒಳರೋಗಿಗಳಾಗಿ ದಾಖಲಾಗಿರುವ ಸುಮಾರು 218 ರೋಗಿಗಳನ್ನು ಹಂತ ಹಂತವಾಗಿ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮೂರು ದಿನಗಳ ಒಳಗಾಗಿ ವರ್ಗಾವಣೆ ಮಾಡಲಾಗುವುದು. ಹೊರರೋಗಿ ಚಿಕಿತ್ಸೆಗಾಗಿ ಬರುವವರನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಹಂತಹಂತವಾಗಿ 705 ಹಾಸಿಗೆಗಳ ವೆನ್ಲಾಕ್ ಆಸ್ಪತ್ರೆಯ ಹಳೆ ಕಟ್ಟಡದ ವಾರ್ಡ್‌ಗಳನ್ನು ಕೊರೋನ ಪ್ರಕರಣಗಳನ್ನು ದಾಖಲೆ ಮಾಡಲು ಉಪಯೋಗಿಸಲಾಗುವುದು ಎಂದರು.

Also Read  ಕಲ್ಲಡ್ಕ ಪೇಟೆಯ ಸ್ವಚ್ಚತೆಗೆ ಸವಾಲಾಗಿರುವ ಕಸದ ರಾಶಿ..! ➤ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಇನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕನೆ ಮಾಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 20 ಹಾಸಿಗೆಯ ಐಸೋಲೇಷನ್ ವಾರ್ಡ್‌ಗಳನ್ನು ತೆರೆಯಲಾಗುವುದು. ಇದೇ ರೀತಿ ತಾಲೂಕುಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಕ್ಕೆ ತಾಲೂಕು ಆಸ್ಪತ್ರೆ ಹಾಗೂ ಸ್ಥಳೀಯ ಆಸ್ಪತ್ರೆಗಳೊಂದಿಗೆ ಸಮನ್ವಯ ಮಾಡಿಕೊಳ್ಳಲಾಗುತ್ತದೆ ಎಂದರು.

ಹಾಗೆಯೇ ವೆನ್ಲಾಕ್ ಆಸ್ಪತ್ರೆಯಲ್ಲಿರುವ ವೈದ್ಯರು ಹಾಗೂ ನರ್ಸ್‌ಗಳ ಕೊರತೆ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳ ನರ್ಸ್‌ಗಳಿಗೆ ತರಬೇತಿ ನೀಡಲು ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆದುಕೊಳ್ಳಲಾಗುತ್ತದೆ. ವೆನ್ಲಾಕ್ ಆಸ್ಪತ್ರೆಯಲ್ಲಿ 52 ವೆಂಟಿಲೇಟರ್‌ಗಳಿದ್ದು, ಹೊಸ ಕಟ್ಟಡದಲ್ಲಿ ಇನ್ನೊಂದು ವಾರದಲ್ಲಿ 100 ವೆಂಟಿಲೇಟರ್‌ಗಳನ್ನು ಅಳವಡಿಸುವಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Also Read  ಕಟೀಲು‌ ದೇವಳದಲ್ಲಿ ಪಂಪ್ ಸೆಟ್ ಕಳವು ಪ್ರಕರಣ ► ಕಡಬದ ಇಬ್ಬರ ಸಹಿತ ಮೂವರು ಆರೋಪಿಗಳ ಬಂಧನ

ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪ ಉಪಸ್ಥಿತರಿದ್ದರು.

error: Content is protected !!
Scroll to Top