ಮಂಗಳೂರು, ಮಾ.25: ಕೊರೋನ ವೈರಸ್ ಹರಡದಂತೆ ತಡೆಕಟ್ಟಲು ದ.ಕ. ಜಿಲ್ಲಾದ್ಯಂತ ಸೆಕ್ಷನ್ 144ವಿಧಿಸಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದೇ ನೆಪದಲ್ಲಿ ಮಾರ್ಕೆಟ್ನಲ್ಲಿ ಗುಂಪು ಗುಂಪಾಗಿ ಬಂದು ವಸ್ತುಗಳನ್ನು ಖರೀಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಾಳೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಅಗತ್ಯ ವಸ್ತುಗಳನ್ನು ತಮ್ಮ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಬಹುದು, ಆದರೆ ಹಲವೆಡೆ ಮಾರ್ಕೆಟ್ , ಅಗತ್ಯ ವಸ್ತುಗಳ ಖರೀದಿಗೆ ಜನ ಒಮ್ಮೆಲೆ ಮುಗಿಬೀಳುತ್ತಿದ್ದಾರೆ. ವರ್ತಕರು ಗ್ರಾಹಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ವ್ಯಾಪಾರ ವಹಿವಾಟು ಮಾಡುವ ಬಗ್ಗೆ ತಿಳಿದುಬಂದಿದ್ದು ಹೀಗಾಗಿ ನಾಳೆ ಎಲ್ಲವನ್ನು ಬಂದ್ ಮಾಡಲಾಗುವುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ಮಾಡುತ್ತಿದ್ದೇವೆ.
ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ. ಇದಕ್ಕಾಗಿ ಶೀಘ್ರವೇ ವ್ಯವಸ್ಥೆ ಮಾಡಲಾಗುವುದು. ಸರ್ಕಾರದ ಕಡೆಯಿಂದ ಪ್ರತಿ ಮನೆಗೆ ಹೇಗೆ ತಲುಪಿಸೋದು, ಅಪಾರ್ಟ್ ಮೆಂಟ್ ಗಳಿಗೆ ಹೇಗೆ ತಲುಪಿಸೋದು ಎನ್ನುವ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.