ಮಂಗಳೂರು, ಮಾ.24: ಕೊರೋನ ಶಂಕಿತರ ಹಾಗೂ ರೋಗಿಗಳ ಎಲ್ಲಾ ಮಾಹಿತಿ ಸಂಗ್ರಹಿಸಲು ಹಾಗೂ ಸಮನ್ವಯತೆ ಕಾಪಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಸಜ್ಜಿತ ಕಂಟ್ರೋಲ್ ರೂಂ ತೆರೆಯಲಾಗಿದೆ.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ನಿರ್ದೇಶನದಂತೆ, ಕೆಎಎಸ್ ಅಧಿಕಾರಿಯಾಗಿರುವ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ಕಂಟ್ರೋಲ್ ರೂಂನಲ್ಲಿ ತರಭೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿ, ಬೇರೆ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಬಂದವರ ಮಾಹಿತಿ, ಅವರು ಸಂಪರ್ಕ ಹೊಂದಿದ ಪ್ರದೇಶಗಳು, ವ್ಯಕ್ತಿಗಳ ಮಾಹಿತಿಗಳನ್ನು ಈ ಕಂಟ್ರೋಲ್ ರೂಂನಲ್ಲಿ ಸಂಗ್ರಹಿಸಲಾಗುತ್ತಿದೆ.
ಶಂಕಿತ ರೋಗಿಗಳ ವಿವರ, ವಿಮಾನದಲ್ಲಿ ಅವರೊಂದಿಗೆ ಬಂದ ಪ್ರಯಾಣಿಕರ ವಿವರಗಳನ್ನು ವಿಮಾನನಿಲ್ದಾಣದಿಂದ, ಸಂಬಂಧಪಟ್ಟ ವಿಮಾನ ಸಂಸ್ಥೆಗಳಿಂದ ಪಡೆದು ಅವರೊಂದಿಗೆ ನಿರಂತರ ಸಂಪರ್ಕ ಇಡಲಾಗುತ್ತಿದೆ. ವಿದೇಶದಿಂದ ಬಂದು ಗೃಹ ನಿಗಾವಣೆಯಲ್ಲಿರುವವರೊಂದಿಗೂ ನಿರಂತರ ನಿಗಾ ಇಲ್ಲಿಂದ ಇಡಲಾಗುತ್ತಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರ ವಿವರಗಳನ್ನು ಜಿಲ್ಲಾವಾರು ವಿಂಗಡಿಸಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಇಲ್ಲಿಂದಲೇ ಮಾಹಿತಿ ಕಳುಹಿಸಲಾಗುತ್ತಿದೆ.
ದ.ಕ. ಜಿಲ್ಲೆಯ ಪ್ರಯಾಣಿಕರೊಂದಿಗೆ ಮಾತ್ರ ಇಲ್ಲಿಂದಲೇ ಸಂಪರ್ಕದಲ್ಲಿದ್ದು, ಪಡೆಯಲಾಗುತ್ತಿದೆ. ಇದರಿಂದ ಕರೋನಾ ಶಂಕಿತರ ಹಾಗೂ ನಿಗಾವಣೆಯಲ್ಲಿರುವ ಸಮಗ್ರ ವಿವರವನ್ನು ಕೇಂದ್ರೀಕರಿಸಲು ನೆರವಾಗಿದೆ. ವಿಮಾನನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಆರೋಗ್ಯ ಇಲಾಖೆಗಳ ನಡುವೆ ಮಾಹಿತಿ ಸಮನ್ವಯತೆಗೆ ಇದು ನೆರವಾಗಿದೆ.