(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.24. ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನ ವೈರಸ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು, ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ಅವಶ್ಯಕ ಸೇವೆಗಳಾದ ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಹಂಪಲು, ಸಗಟು-ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ತೆರೆಯಬಹುದಾಗಿದೆ. ಓಲಾ, ಉಬರ್, ಟ್ಯಾಕ್ಸಿ, ರಿಕ್ಷಾ ಮತ್ತಿತರ ಬಾಡಿಗೆ ವಾಹನಗಳಲ್ಲಿ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯುವಂತಿಲ್ಲ. ಆದರೆ ಈ ವಾಹನಗಳಲ್ಲಿ ತುರ್ತು ಮತ್ತು ಆವಶ್ಯಕ ವಸ್ತುಗಳ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ. ಆವಶ್ಯಕ ಸೇವೆಗಳು ಮತ್ತು ವಸ್ತುಗಳು, ಆಹಾರ, ವೈದ್ಯಕೀಯ ಉಪಕರಣಗಳು, ಔಷಧ, ಇಂಧನ ಹಾಗೂ ಕೃಷಿ ಉತ್ಪನ್ನಗಳ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಕೈಗಾರಿಕೆಗಳು, ಕಾರ್ಖಾನೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.