ಮಂಗಳೂರು, ಮಾ.23: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಲಾಕ್‌ಡೌನ್ ಘೋಷಿಸಿದೆ. ಅಲ್ಲದೆ ಜಿಲ್ಲಾಧಿಕಾರಿ ಸೆಕ್ಷನ್ 144ರಲ್ಲಿ ನಿರ್ಬಂಧಕಾಜ್ಞೆಯನ್ನು ಹೊರಡಿಸಿದ್ದಾರೆ. ಇದನ್ನು ಉಲ್ಲಂಘಿಸಿ ಜನರು ಹೊರಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಬಿದ್ದಲ್ಲಿ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದ್ದಾರೆ.
ಯಾವುದಾದರೂ ವೈದ್ಯಕೀಯ ತುರ್ತು ಹೊರತು ಪಡಿಸಿ ಬೇರೆ ಯಾರೂ ಕೂಡಾ ಮನೆಯಿಂದ ಹೊರ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕೇವಲ ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ಸೂಚಿಸಿದ್ದಾರೆ. ಯಾರಾದರೂ ಈ ನಿಯಮ ಉಲ್ಲಂಘನೆ ಮಾಡುವುದು ಗಮನಕ್ಕೆ ಬಂದಲ್ಲಿ ಅದನ್ನು ಪೊಲೀಸರಿಗೆ ತಿಳಿಸಿದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ್ರಪಂಚದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದುಕೊಂಡ ಕೊರೊನಾ ವೈರಸ್ ಈಗ ಇಡೀ ದೇಶವೇ ಎದುರಿಸುತ್ತಿರುವ ಸವಾಲು, ಸರಕಾರ ಈಗಾಗಲೇ ಎಲ್ಲಾ ಕ್ರಮ ಕೈಗೊಂಡು ನಮ್ಮ ನೆರವಿಗೆ ಧಾವಿಸಿದೆ. ಯಾರೂ ಕಳವಳ ಪಡುವ ಅಗತ್ಯವಿಲ್ಲ. ಆದರೆ ಇದು ನಮ್ಮೆಲ್ಲರ ಕರ್ತವ್ಯ, ಇದನ್ನು ನಾವೆಲ್ಲರೂ ಕೈಜೋಡಿಬೇಕು ಎಂದು ಹೇಳಿದ್ದಾರೆ.