ಕೊರೋನಾ ನಿಯಂತ್ರಣಕ್ಕೆ ಸ್ವಯಂ ನಿಗಾ ಅನಿವಾರ್ಯ ➤ ಮಾಧ್ಯಮ ಸಂವಾದದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್

ಮಂಗಳೂರು, ಮಾ.20. ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಸ್ವಯಂ ನಿಗಾ ಅಳವಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ವೈರಾಣು ಅತಿ ವೇಗವಾಗಿ ಹಬ್ಬುತ್ತದೆ. ಇದಕ್ಕೆ ತಕ್ಕ ಜನಸಾಮಾನ್ಯರು ಮುನ್ನೆಚ್ಚರಿಕೆ ವಹಿಸಿ ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಣ ಹೇರಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಕಚೇರಿ ಸಿಬ್ಬಂದಿಗಳು ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ಕೆಲಸ ಮಾಡಲು ಪ್ರಯತ್ನಿಸಬೇಕು. ಕೆಲವೊಂದು ಕಟ್ಟುನಿಟ್ಟು ಅನಿವಾರ್ಯವಾದ್ದರಿಂದ ಕೆಲವು ಸೇವೆಗಳು ವ್ಯತ್ಯಯವಾಗಬಹುದು. ಆದರೂ ಅನಿವಾರ್ಯವಾಗಿ ಎಲ್ಲರೂ ಆಡಳಿತದ ಜತೆಯಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲದಿದ್ದರೂ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಕೂಡಲೆ ಮೆಡಿಕಲ್ ಕಾಲೇಜುಗಳಿಗೆ ನೀಡಲಾದ ಆದೇಶವನ್ನು ಕಾರ್ಯರೂಪಕ್ಕೆ ತರಲಾಗುವುದು. ಈಗಾಗಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಕೊರೋನಾ ಪ್ರಕರಣಗಳ ನಿರ್ವಹಣೆ ಕುರಿತಂತೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ ಎಂದು ಅವರು ಹೇಳಿದರು.

Also Read  ದೇಶದಲ್ಲಿ ರಸಗೊಬ್ಬರದ ಕೊರತೆಯಿಲ್ಲ ➤ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟನೆ

ಕೊರೊನಾ ಚಿಕಿತ್ಸೆಗೆ ಇಎಸ್‍ಐ ಆಸ್ಪತ್ರೆ:
ಮಂಗಳೂರಿನಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಬೆಡ್‍ಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಆಯುಷ್ ಆಸ್ಪತ್ರೆಯಲ್ಲೂ 10 ಬೆಡ್‍ಗಳ ಪ್ರತ್ಯೇಕ ವಾರ್ಡ್ ಮಾಡಲಾಗುತ್ತಿದೆ. ಮುಂದಿನ ದಿನಗಳ ಅಗತ್ಯ ಬಿದ್ದರೆ ಇತರ ಕಟ್ಟಡಗಳಲ್ಲೂ ಚಿಕಿತ್ಸೆ ಕೇಂದ್ರಗಳನ್ನು ಆರಂಭಿಸುವ ಚಿಂತನೆಯಿದೆ. ಅದಕ್ಕಾಗಿ ಕೆಲವು ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಡಿ ಬಂದ್‍ಗೆ ಚಿಂತನೆ: ಜಿಲ್ಲೆಯ ಗಡಿಗಳನ್ನು ಬಂದ್ ಮಾಡುವ ಚಿಂತನೆಯಿದೆ. ಅಗತ್ಯಬಿದ್ದರೆ ಈ ಕುರಿತು ಚರ್ಚೆ ನಡೆಸಿ ಬಳಿಕ ತೀರ್ಮಾನಿಸಲಾಗುವುದು ಎಂದು ಇದೇ ಸಂದರ್ಭ ಅವರು ಪ್ರತಿಕ್ರಿಯಿಸಿದರು. ಆರೋಗ್ಯ ಕೇಂದ್ರ ಮಟ್ಟದಲ್ಲಿ ತಂಡ: ಕೊರೋನಾ ಸೋಂಕಿತರ ಕುರಿತು ಮಾಹಿತಿ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲೇ ಆರೋಗ್ಯಾಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡ ರಚನೆ ಮಾಡಲಾಗಿದೆ. ಜಿಲ್ಲಾಡಳಿತತದ ಗಮನಕ್ಕೆ ಬಾರದೆ ವಿದೇಶಗಳಿಂದ ಬಂದವರಿದ್ದರೆ ಅಥವಾ ಕೊರೋನಾ ಸೋಂಕಿನ ಲಕ್ಷಣಗಳಿದ್ದವರ ಕುರಿತು ಜನರೇ ಮಾಹಿತಿ ನೀಡುತ್ತಿದ್ದಾರೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ಮಾಹಿತಿ ಬಂದ ಕೂಡಲೆ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ ಅಂಥ ಅನೇಕ ಮಾಹಿತಿಗಳನ್ನು ಸಾರ್ವಜನಿಕರು ನೀಡಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಾಹಿತಿ ನೀಡಿ: ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಕೊರೋನಾ ಸೋಂಕಿತ ಕಾಸರಗೋಡು ನಿವಾಸಿ ಸಂಚಾರ ನಡೆಸಿದ ಸ್ಥಳಗಳನ್ನೆಲ್ಲ ಅಲ್ಲಿನ ಜಿಲ್ಲಾಡಳಿತ ಗುರುತಿಸಿದೆ. ಗುರುತಿಸದೆ ಉಳಿದ ಜಾಗಗಳಿದ್ದರೆ ಗಮನ ಹರಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಯಾರ್ಯಾರು ಬಂದಿರುತ್ತಾರೆ ಎಂಬುದನ್ನು ಪತ್ತೆ ಮಾಡುವುದು ಕಷ್ಟಕರ. ಸೋಂಕಿತ ವ್ಯಕ್ತಿ ಸಂಚರಿಸಿದ ರೂಟ್ ಮ್ಯಾಪ್‍ನ್ನು ಜಿಲ್ಲಾಡಳಿತ ಬಿಡುಗಡೆ ಮಾಡುತ್ತದೆ. ಅದಕ್ಕೆ ಅನುಗುಣವಾಗಿ ಜನರೇ ಮುಂದೆ ಬಂದು ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಿಂಧು ರೂಪೇಶ್ ಮನವಿ ಮಾಡಿದರು.

Also Read  ಕೊಳೆತ ಮೊಟ್ಟೆ ಪೂರೈಕೆ..! - ಗರ್ಭಿಣಿ ಮಹಿಳೆ, ಮಕ್ಕಳು ಅಸ್ವಸ್ಥ

ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ: ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮಾತನಾಡಿ, ಜನರು ಗಾಬರಿ ಪಡುವ ಅಗತ್ಯವಿಲ್ಲ. ಆದರೆ ಎಲ್ಲರೂ ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮವನ್ನು ಅಸನುಸರಿಸಬೇಕು. ಸೋಂಕು ಇದ್ದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಾರ್ವಜನಿಕ ಸಂಪರ್ಕದಿಂದ ದೂರ ಇರಿ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

Also Read  ಪೆಟ್ರೋಲ್, ಗ್ಯಾಸ್ ಜೊತೆಗೆ ದುಬಾರಿಯಾದ ಅಡುಗೆ ಎಣ್ಣೆ ➤ ಜನಸಾಮಾನ್ಯರಿಗೆ ಗಾಯದ ಮೇಲೆ ಮತ್ತೆ ಬರೆ‌

error: Content is protected !!
Scroll to Top