ಹುಬ್ಬಳ್ಳಿ, ಮಾ.16: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಪಾಪು’ ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ ಡಾ. ಪಾಟೀಲ ಪುಟ್ಟಪ್ಪ(101) ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ಪಾಟೀಲ ಪುಟ್ಟಪ್ಪ ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಾಪು ಹಲವಾರು ಕನ್ನಡ ಪರ ಹೋರಾಟಗಳ ನೇತೃತ್ವವನ್ನು ವಹಿಸಿ ಈ ಭಾಗದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು.
ಕನ್ನಡಿಗರು ಬಹುಸಂಖ್ಯಾತರಾಗಿದ್ದ ಗಡಿಭಾಗದ ಪ್ರದೇಶಗಳ ಒಗ್ಗೂಡುವಿಕೆಗೆ ಆಗ್ರಹಿಸಿ 1940 ಹಾಗೂ 1950ರಲ್ಲಿ ನಡೆದಿದ್ದ ಹಕ್ಕೊತ್ತಾಯ ಹೋರಾಟದಲ್ಲಿ ಪಾಟೀಲ ಪುಟ್ಟಪ್ಪ ಮುಂಚೂಣಿಯಲ್ಲಿದ್ದರು.