ನೆಲ್ಯಾಡಿ: ಅಕ್ರಮವಾಗಿ ಮದ್ಯ, ಜಿಲೆಟಿನ್ ಕಡ್ಡಿ, ಡೀಸೆಲ್‌ ಮಾರಾಟ ➤ ಆರೋಪಿ ಹೊಟೇಲ್ ಮಾಲಕನ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ಹೋಟೆಲ್‌ವೊಂದರಲ್ಲಿ ಡೀಸೆಲ್‌, ಜಿಲೆಟಿನ್ ಕಡ್ಡಿ ಹಾಗೂ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಪೊಲೀಸರು ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಎಂಜಿರ ಸಮೀಪದ ಲಾವತ್ತಡ್ಕ ಎಂಬಲ್ಲಿ ಭಾನುವಾರದಂದು ನಡೆದಿದೆ.

ಬಂಧಿತ ಆರೋಪಿಯನ್ನು ಲಾವತ್ತಡ್ಕದ ಜನನಿ ಹೊಟೇಲ್ ಮಾಲಕ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಯು ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕದಲ್ಲಿ ಗುಂಡ್ಯ ಹೊಳೆಯ ಬದಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಹೊಟೇಲ್ ನಡೆಸುತ್ತಿದ್ದು, ಇಲ್ಲಿ ಅಕ್ರಮ ಮದ್ಯ ಮಾರಾಟ, ಟ್ಯಾಂಕರ್‌ಗಳಿಂದ ಡೀಸೆಲ್ ಕಳವುಗೈದು ಮಾರಾಟ ಹಾಗೂ ಜಿಲೆಟಿನ್ ಕಡ್ಡಿಗಳ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಭಾನುವಾರದಂದು ದಾಳಿ ನಡೆಸಿ ಅಕ್ರಮ ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಸದ್ರಿ ಹೋಟೆಲ್‌ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿತ್ತೆಂಬ ಆರೋಪವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ರಾಜ್ಯ ಗೃಹ ಇಲಾಖೆಗೆ ದೂರು ನೀಡಿದ್ದರು. ಇದೇ ದೂರಿನನ್ವಯ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಬೇರೆ ಸರ್ವೇ ನಂಬರ್ ಬಳಸಿ ಹೊಟೇಲ್ ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ್ದ ಮೆಸ್ಕಾಂನ ವಿಜಿಲೆನ್ಸ್ ತಂಡವು ಕಳೆದ ಫೆಬ್ರವರಿಯಲ್ಲಿ ದಂಡವನ್ನೂ ವಿಧಿಸಿತ್ತು.

error: Content is protected !!

Join the Group

Join WhatsApp Group