ಮಂಗಳೂರು, ಮಾ. 14: ರಾಜ್ಯ ಸರಕಾರ ಆದೇಶದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮಾಲ್, ಸಿನಿಮಾ ಮಂದಿರಗಳನ್ನು ಶನಿವಾರದಿಂದ ಬಂದ್ ಮಾಡಲಾಗಿದೆ.
ಸೂಪರ್ ಮಾರ್ಕೆಟ್, ಅತ್ತಾವರದ ಬಿಗ್ ಬಝಾರ್ ತೆರೆದಿವೆ. ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ, ಧಕ್ಕೆಯಲ್ಲಿ ಸಾಧಾರಣ ಜನಸಂದಣಿ ಜತೆ ಮಾರಾಟ ವಹಿವಾಟು ನಡೆಯುತ್ತಿದೆ. ಕೇಂದ್ರ ಮಾರುಕಟ್ಟೆಯಲ್ಲಿ ಜನಸಂದಣಿ ಸಾಧಾರಣವಾಗಿದ್ದು, ವ್ಯಾಪಾರ ನಡೆಯುತ್ತಿದೆ.
ಫಿಝಾ ಮಾಲ್, ಸಿಟಿಸೆಂಟರ್ ಮಾಲ್ ಗಳು, ಸಿನಿಮಾ ಮಂದಿರಗಳ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ. ಹಾಗಿದ್ದರೂ ಹಾಸ್ಟೆಲ್ ಗಳಲ್ಲಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳು, ಮಾಲ್ ಗಳಿಗೆ ಸುತ್ತಾಡಲು ಬಂದವರನ್ನು ಮಾಲ್ ಗಳ ಸೆಕ್ಯುರಿಟಿ ಗಾರ್ಡ್ ಗಳು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳೊಂದಿಗೆ ಕೆಲವು ಪೋಷಕರು ಮಾಲ್ ಗಳತ್ತ ಆಗಮಿಸಿ ವಿಚಾರಿಸಿ ಹಿಂತಿರುಗುತ್ತಿದ್ದಾರೆ. ಉಳಿದಂತೆ ನಗರಲ್ಲಿ ಹೊಟೇಲ್ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಮಾಲ್ ಗಳ ಸಿಬ್ಬಂದಿಗೆ ನಿನ್ನೆ ಸೂಚನೆ ಸಿಗದ ಹಿನ್ನೆಲೆಯಲ್ಲಿ ಕೆಲವರು ಆಗಮಿಸಿ ಹಿಂತಿರುಗುತ್ತಿದ್ದಾರೆ. ಶನಿವಾರ ಹಾಗು ರವಿವಾರ ಮಾಲ್ ಗಳಿಗೆ ಸಾರ್ವಜನಿಕರ ಸಂಖ್ಯೆ ಅಧಿಕವಾಗಿರುತ್ತದೆ. ಸರಕಾರಿ ಕಚೇರಿಗಳು, ಬ್ಯಾಂಕ್ ಗಳಿಗೆ ಇಂದು ಮಾಸಿಕ ದ್ವಿತೀಯ ಶನಿವಾರ ಆಗಿದ್ದು ಬಂದ್ ಆಗಿವೆ.