(ನ್ಯೂಸ್ ಕಡಬ) newskadaba.com ಕಡಬ, ಮಾ.12. ಮಾರಕ ಕೊರೋನಾ ವೈರಸ್ ದಿನೇ ದಿನೇ ವಿಶ್ವದೆಲ್ಲೆಡೆ ಹಬ್ಬುತ್ತಿರುವಂತೆಯೇ ಹಲವೆಡೆ ಕೋಳಿ ಬೆಲೆಯಲ್ಲಿ ಇಳಿಮುಖ ಆಗತೊಡಗಿದೆ.
ಪಕ್ಕದ ರಾಜ್ಯ ಕೇರಳದಲ್ಲಿ ಹಕ್ಕಿಜ್ವರವೂ ಕಂಡುಬಂದಿದ್ದು, ಈ ನಡುವೆ ಕೆಲವರು ಕೋಳಿ ಮಾಂಸ ಸೇವನೆಯಿಂದ ಕೊರೋನಾ, ಹಕ್ಕಿಜ್ವರ ಹರಡುತ್ತದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರಿಂದ ಮಾಂಸದ ಕೋಳಿಯನ್ನು ಕೇಳುವವರು ಇಲ್ಲದಂತಾಗಿದೆ. ಬುಧವಾರದಂದು ಕಡಬದಲ್ಲೂ ಕೋಳಿ ದರದಲ್ಲಿ ಭರ್ಜರಿ ಆಫರ್ ಹಾಕಿದ ಕಾರಣ ಕ್ಷಣಮಾತ್ರದಲ್ಲಿ ಸಾವಿರಗಟ್ಟಲೆ ಕೋಳಿ ಮಾರಾಟವಾಗಿದೆ. ಕಡಬದ ನೆಕ್ಕಿತ್ತಡ್ಕ ಎಂಬಲ್ಲಿನ ಕೋಳಿ ಫಾರಂನಲ್ಲಿ ಸಾವಿರಕ್ಕೂ ಮಿಕ್ಕಿದ ಬ್ರಾಯ್ಲರ್ ಕೋಳಿಗಳನ್ನು ಸಾಕಲಾಗಿದ್ದು, ಬುಧವಾರದಂದು ಕಿಲೋವೊಂದಕ್ಕೆ 25 ರೂ.ನಂತೆ ಮಾರಾಟ ಮಾಡಲಾಗಿದೆ.
ಕೋಳಿ ಬೆಲೆಯಲ್ಲಿ ಆಫರ್ ಇದೆ ಎಂಬ ಸುದ್ದಿ ಹಬ್ಬುತ್ತಲೇ ಕೋಳಿ ಫಾರಂ ಮುಂದೆ ಜನರು ಜಮಾವಣೆಗೊಂಡಿದ್ದು, ಕ್ಷಣಮಾತ್ರದಲ್ಲಿ ಕೋಳಿಗಳು ಖಾಲಿಯಾಗಿವೆ. ಆ ನಂತರವೂ ಹಲವರು ಆಗಮಿಸಿದರಾದರೂ ಕಡಿಮೆ ಬೆಲೆಯಲ್ಲಿ ಕೋಳಿ ಸಿಗದೆ ನಿರಾಶರಾಗಿ ಹಿಂತಿರುಗಿದ್ದಾರೆ. ಒಟ್ಟಿನಲ್ಲಿ ಕೊರೋನಾ ಭೀತಿಯಿಂದ ಕೋಳಿಯ ದರ ಮಾರುಕಟ್ಟೆಯಲ್ಲಿ ಕಡಿಮೆಯಾದರೂ ಕಡಬದವರಿಗೆ ಬುಧವಾರದಂದು ಕೋಳಿಯ ಹಬ್ಬವಾಗಿತ್ತು.