ಬೆಂಗಳೂರು, ಮಾ.4: ರಾಜ್ಯಾದ್ಯಂತ ಇಂದಿನಿಂದ ರಾಜ್ಯದ 1,016 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದ 2,01,445, ವಾಣಿಜ್ಯ ವಿಭಾಗದ 2,61,674 ಹಾಗೂ ವಿಜ್ಞಾನ ವಿಭಾಗದ ಒಟ್ಟು 2,16,930 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗಳು ಬರೆಯಲಿದ್ದಾರೆ. ಇಂದಿನಿಂದ ಆರಂಭವಾಗುವ ಪರೀಕ್ಷೆಯು ಮಾ.23ರವರೆಗೂ ನಡೆಯಲಿದೆ.
ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ 40 ಪುಟಗಳ ಉತ್ತರ ಬುಕ್‌ಲೆಟ್‌ನ್ನು ನೀಡಲಾಗುತ್ತದೆ. ಇದರಲ್ಲೇ ಆತ ತನ್ನ ಉತ್ತರಗಳನ್ನು ಬರೆದು ಪರೀಕ್ಷೆಯನ್ನು ಮುಗಿಸಬಹುದು. ಯಾರಿಗಾದರೂ ಇನ್ನೂ ಹೆಚ್ಚುವರಿ ಹಾಳೆ ಬೇಕಿದ್ದರೆ ಮತ್ತೊಂದು 40 ಪುಟಗಳ ಬುಕ್‌ಲೆಟ್‌ನ್ನೇ ನೀಡಲಾಗುತ್ತದೆ. ಅದರಲ್ಲಿ ಆತ ಒಂದು ಪುಟ ಬರೆದರೂ ಅದನ್ನು ಮಾನ್ಯ ಮಾಡಲಾಗುತ್ತದೆ. ಕೊನೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ವಿದ್ಯಾರ್ಥಿ ಉತ್ತರ ಬರೆದ ಒಟ್ಟು ಪುಟಗಳ ಸಂಖ್ಯೆಯನ್ನು ಬರೆದು ಸಹಿ ಮಾಡುತ್ತಾರೆ.
ವಿದ್ಯಾರ್ಥಿಗಳು ಬೆಳಗ್ಗೆ 10:15ಕ್ಕೆ ಪರೀಕ್ಷಾ ಹಾಲ್‌ನಲ್ಲಿ ಹಾಜರಿರಬೇಕು. 10:30ರಿಂದ ಅಪರಾಹ್ನ 1:30ರವರೆಗೆ ಅವರು ಪರೀಕ್ಷೆಯನ್ನು ಬರೆಯಬಹುದು. ಆಯಾ ದಿನಗಳಂದು ಬೆಳಗ್ಗೆ ಜಿಲ್ಲಾ ಕೇಂದ್ರದ ಖಜಾನೆಯಲ್ಲಿರುವ ಪ್ರಶ್ನೆಪತ್ರಿಕೆ ಗಳನ್ನು ಒಟ್ಟು ಎಂಟು ಮಾರ್ಗಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತದೆ.
ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 100ಮೀ. ವ್ಯಾಪ್ತಿಯಲ್ಲಿ ಈಗಾಗಲೇ ನಿಷೇಧಾಜ್ಞೆ ವಿಧಿಸಲಾಗಿದೆ. ಅಲ್ಲಿರುವ ಎಲ್ಲಾ ಝೆರಾಕ್ಸ್ ಅಂಗಡಿ ಹಾಗೂ ಸೈಬರ್ ಸೆಂಟರ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳಾಗದಂತೆ ಜಾಗೃತ ತಂಡಗಳನ್ನು ರಚಿಸಿದ್ದು, ಅವುಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಗಳು ಮೊಬೈಲ್, ಕ್ಯಾಲ್ಕುಲೇಟರ್, ಇಲೆಕ್ಟ್ರಾನಿಕ್ಸ್ ವಾಚ್ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪರೀಕ್ಷೆ ನಿರಾಂತಕ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿರುವ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಪ್ಪು ಪಟ್ಟಿಯನ್ನು ಧರಿಸಿ ಪರೀಕ್ಷೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆಯಿಂದ ಪ್ರಾರಂಭಗೊಳ್ಳುವ ದ್ವಿತೀಯ ಪಿಯುಸಿ ಪರೀಕ್ಷೆಗಳು ನಿರಾಂತಕವಾಗಿ ನಡೆಯಲಿವೆ. ವಿದ್ಯಾರ್ಥಿಗಳು ಹಾಗೂ ಹೆತ್ತವರು ಆತಂಕಗೊಳ್ಳಬೇಕಿಲ್ಲ.