ಮಂಗಳೂರು, ಫೆ.29: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ತ್ಯಾಜ್ಯ ಕುಸಿತದಿಂದ ಸಂಭವಿಸಿದ ಅನಾಹುತಗಳಿಗೆ ಸಂಬಂಧಿಸಿ ಪರಿಹಾರವಾಗಿ ಸರಕಾರ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ತಕ್ಷಣ ತುರ್ತು ಕಾಮಗಾರಿ ಹಾಗೂ ಪರಿಹಾರ ಕಾರ್ಯ ನೆರವೇರಿಸುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತ್ಯಾಜ್ಯ ಕುಸಿತದಿಂದ ನಿರಾಶ್ರಿತರಾದ 27 ಕುಟುಂಬಗಳಿಗೆ ಕರ್ನಾಟಕ ವಸತಿ ಮಂಡಳಿಯ ವಸತಿ ಸಮುಚ್ಚಯದಲ್ಲಿ ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ತಜ್ಞ ತಂಡದಿಂದ ಸ್ಥಳ ಪರಿಶೀಲನೆ ನಡೆಸಿದ ವರದಿಯಂತೆ ಪಾಲಿಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಥಮ ಹಂತವಾಗಿ ಬಿಡುಗಡೆಯಾದ ಹಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ತಡೆಗೋಡೆ ನಿರ್ಮಾಣ ಹಾಗೂ ಉಳಿದ 4 ಕೋಟಿ ರೂ. ನಿರಾಶ್ರಿತರ ಪರಿಹಾರ ಮೊತ್ತ ಪಾವತಿಗೆ ಉಪಯೋಗವಾಗಲಿದೆ ಎಂದರು.
ಪಚ್ಚನಾಡಿಯಲ್ಲಿ ಕುಸಿತಗೊಂಡಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ಸಂಸ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ತುಂಬೆಯ ಹಳೆ ಅಣೆಕಟ್ಟಿನಲ್ಲಿ ಕಳೆದ ವರ್ಷ ಕುಸಿತವುಂಟಾಗಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ವ್ಯವಸ್ಥೆಗೆ ಪಾಲಿಕೆಯಿಂದ 15 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಈ ಬಗ್ಗೆ ಚಿಂತನೆ ನಡೆಸಿದೆ. ಇದೇ ವೇಳೆ ಹೊಸ ತುಂಬೆ ಅಣೆಕಟ್ಟಿನಲ್ಲಿ 7 ಮೀಟರ್‌ಗೆ ನೀರು ನಿಲುಗಡೆಗೆ 344 ಎಕರೆ ರೈತರ ಭೂಮಿ ಮುಳುಗಡೆಯಾಗಲಿದೆ. ಆ ಭೂಮಿ ಸ್ವಾಧಿನ ಪಡಿಸಲು 130 ಕೋಟಿರೂ. ಅನುದಾನದ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಪಡೆದಿದ್ದು, ಈಗಾಗಲೇ 13.87 ಕೋಟಿ ರೂ.ಗಳ 4ಕಾಮಗಾರಿಗಳು ಪೂರ್ಣವಾಗಿವೆ. 540 ಕೋಟಿ ರೂ.ಗಳ 24 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಂತೆ 14 ಕೋಟಿ ರೂ.ಗಳ ಕಾಮಗಾರಿ ಡಿಪಿಆರ್ ಸಿದ್ದವಾಗಿದೆ. ಮಳೆಗಾಲಕ್ಕೆ ಮೊದಲು ಆಗಬೇಕಾದ ಕಾಮಗಾರಿಯನ್ನು ನಿಗದಿತ ಸಮಯ ಹಾಗೂ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ನಗರ ನೀರು ಪೂರೈಕೆಯಡಿ ಉಳ್ಳಾಲ ಹಾಗೂ 25 ಹಳ್ಳಿಗಳಿಗೆ 195 ಕೋಟಿರೂ. ವೆಚ್ಚ ಕುಡಿಯುವ ನೀರಿನ ಸರಬರಾಜು ಕಾಮಗಾರಿಯ ಸಾಧಕ ಬಾಧಕ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಉಳ್ಳಾಲದಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ತೆ ಟೆಂಡರ್ ಸಿದ್ದವಾಗುತ್ತಿದೆ.
ನಗರಕ್ಕೆ 24×7 ನೀರು ಒದಗಿಸಲು 792 ಕೋಟಿ ರೂ. ಗಳ ಕಾಮಗಾರಿ ವರ್ಕ್ ಆರ್ಡರ್ ಆಗಿ ಸರ್ವೆ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ನಗರದ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಚಿವ ಬಸವರಾಜ ಹೇಳಿದರು.