ಎಪ್ರಿಲ್ 1ರಿಂದ ಆಟೋ ಪ್ರಯಾಣ ದರ ಏರಿಕೆ

  • ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರ ಸಮ್ಮತಿ

ಮಂಗಳೂರು, ಫೆ.27: ಆಟೊ ಪ್ರಯಾಣ ದರವು ಪ್ರಸ್ತುತ ಇರುವ ಕನಿಷ್ಠ ದರ (ಮೊದಲ 1.5 ಕಿ.ಮೀ.) 25 ರೂ. ಇನ್ನು 30 ರೂ. ಗೆ ಹಾಗೂ ಪ್ರತಿ ಕಿ.ಮೀ.ಗೆ ನಿಗದಿಯಾಗಿದ್ದ 14 ರೂ. ದರ ಇನ್ನು 15ರೂ. ಗೆ ಏರಿಕೆ ಮಾಡಲು ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರವು ತೀರ್ಮಾನಿಸಿದ್ದು, ಆಟೋ ಪ್ರಯಾಣ ದರ ಎಪ್ರಿಲ್ 1ರಿಂದ ಏರಿಕೆಯಾಗಲಿದೆ.


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಟೋ ದರ ಪರಿಷ್ಕರಣೆ ಕುರಿತು ಸಭೆ ನಡೆಯಿತು. ವಿವಿಧ ಆಟೋ ಸಂಘಟನೆಗಳ ಪ್ರತಿನಿಧಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಸಿಂಧೂ ಬಿ.ರೂಪೇಶ್ ದರ ಏರಿಕೆ ನಿರ್ಧಾರ ಪ್ರಕಟಿಸಿದರು. ಎಪ್ರಿಲ್ 1ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಅವರು ಸಭೆಗೆ ತಿಳಿಸಿದರು.

ದರ ಏರಿಕೆಗೆ ಒತ್ತಾಯ: ತೈಲ ಹಾಗೂ ಎಲ್‌ಪಿಜಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಟೋ ಬಿಡಿಭಾಗಗಳ ದರ ಕೂಡ ಏರಿಕೆಯಾಗಿದೆ. ಕಳೆದ ಆರು ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಆಟೋ ದರ ಪರಿಷ್ಕರಣೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಕನಿಷ್ಠ ದರ 30 ರೂ. ನಿಗದಿಯಾಗಿದೆ. ದ.ಕ. ಜಿಲ್ಲೆಗೂ ಈ ಕನಿಷ್ಠ ದರವನ್ನು ಜಾರಿ ಮಾಡುವಂತೆ ಆಟೋ ಮಾಲಕ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

Also Read  ಸ್ಲಂ ಪುನರ್ವಸತಿ ಯೋಜನೆಯಡಿ 3,024 ಫಲಾನುಭವಿಗಳಿಗೆ ಫ್ಲಾಟ್‌ ಹಸ್ತಾಂತರಿಸಿದ ಪ್ರಧಾನಿ ಮೋದಿ

‘ಹೊಟೇಲ್ ತಿಂಡಿ, ಹಾಲು, ದೀನಸಿ ಸಾಮಗ್ರಿ ಬೆಲೆ ಗಗನಕ್ಕೇರಿದೆ. ಇತರ ಎಲ್ಲ ವೃತ್ತಿಯವರು ಮನಬಂದಂತೆ ದರ ಏರಿಸುತ್ತಾರೆ. ಆದರೆ ಆಟೋ ಪ್ರಯಾಣದರ ಏರಿಸಲು ಸಾರಿಗೆ ಪ್ರಾಧಿಕಾರದ ಅನುಮತಿಗೆ ಕಾಯಬೇಕು. ಪ್ರಾಧಿಕಾರದ ಸಭೆಗಳು ನಡೆಯುತ್ತಿಲ್ಲ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಿಲ್ಲ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಆಟೋ ಚಾಲಕರು ಮೀಟರ್ ನಿಯಮ ಪಾಲಿಸುತ್ತಿಲ್ಲ. ಮಂಗಳೂರಿನ ಆಟೋ ಚಾಲಕರು ಪ್ರಾಮಾಣಿಕವಾಗಿ ಮೀಟರ್ ದರ ಪಡೆಯುತ್ತಿದ್ದಾರೆ. ಆದರೆ ನಮಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆಟೋ ಮಾಲಕರು ದೂರಿದರು.

ಪ್ರಸ್ತುತ ಇರುವ ಕನಿಷ್ಠ ದರ 25 ರೂ. ಇನ್ನು 30 ರೂ.ಗೆ ಏರಿಕೆ ಮಾಡುವ ನಿರ್ಧಾರವನ್ನು ಜಿಲ್ಲಾಧಿಕಾರಿ ಅವರು ಪ್ರಕಟಿಸಿದಾಗ ಎಲ್ಲ ಸಂಘಟನೆಯ ಪದಾಧಿಕಾರಿಗಳು ಸ್ವಾಗತಿದರು. ಆದರೆ ಪ್ರತಿ ಕಿ.ಮೀ. ಗೆ ನಿಗದಿಯಾಗಿದ್ದ 14ರೂ. ದರ ಇನ್ನು 15 ರೂ.ಗೆ ಏರಿಕೆ ಮಾಡುವ ಬಗ್ಗೆ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಯಿತು.

Also Read  ಕಡಬ: ನಾಯಿ ಅಡ್ಡಬಂದ ಪರಿಣಾಮ ಬೈಕ್ ಪಲ್ಟಿ..! ➤ ದಂಪತಿಗೆ ಗಾಯ

15 ರೂ.ಗೆ ಏರಿಕೆಗೆ ಸಹಮತವಿದೆ ಎಂದು ಕೆಲವು ಸಂಘಟನೆಯ ಪದಾಧಿಕಾರಿಗಳು ಪ್ರತಿಕ್ರಿಯಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಂದು ಗುಂಪಿನವರು ಉಡುಪಿಯಲ್ಲಿ ಪ್ರತಿ ಕಿ.ಮೀ.ಗೆ 17 ರೂ. ನಿಗದಿಯಾಗಿದೆ. ಇಲ್ಲಿ 16 ರೂಪಾಯಿಯಾದರೂ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಸಾರ್ವಜನಿಕ ಹಿತದೃಷ್ಟಿಯಿಂದ 15 ರೂ. ನಿಗದಿ ಪಡಿಸಲಾಗಿದೆ. ಸದ್ಯ ಇದಕ್ಕಿಂತ ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಮಂಗಳೂರು ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಪುತ್ತೂರು ಸಾರಿಗೆ ಅಧಿಕಾರಿ ಆನಂದ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಂ ಅಮ್ಟೆ, ಎಸಿಪಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!
Scroll to Top