ಕಡಬ: ಸ್ಫೋಟಕ ತಿಂದು ಹಸು ಮೃತಪಟ್ಟ ಪ್ರಕರಣ ➤ ಆರೋಪಿಯನ್ನು ಬಂಧಿಸದಿದ್ದಲ್ಲಿ ಫೆ.27 ರಂದು ಠಾಣೆಯ ಮುಂಭಾಗ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಹಂದಿ ಬೇಟೆಗೆಂದು ಇಟ್ಟಿದ್ದ ಸ್ಫೋಟಕವನ್ನು ತಿಂದ ಹಸು ಮಾರಣಾಂತಿಕ ಗಾಯವಾಗಿ ಅದರ ಸಾವಿಗೆ ಕಾರಣನಾದ ಆರೋಪಿಯನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು, ತಪ್ಪಿದಲ್ಲಿ ಫೆ 27 ರಂದು ಕಡಬ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹಸುವಿನ ಮಾಲಕಿ ವಿಜಯಲಕ್ಷ್ಮೀ ಬಾಲಚಂದ್ರ ಎಚ್ಚರಿಸಿದ್ದಾರೆ.

ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಸುವಿನ ಮಾಲಕಿ, ನಾವು ಕೂಲಿ ಹಾಗೂ ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸಿಕೊಂಡಿದ್ದೇವೆ. ಫೆಬ್ರವರಿ 17 ರಂದು ಬೆಳಿಗ್ಗೆ ನಾವು ಸಾಕುತ್ತಿದ್ದ ಹಸುಗಳನ್ನು ಮೇವಿಗಾಗಿ ಬಲ್ಯ ಗ್ರಾಮದ ಸಂಪಡ್ಕ ಎಂಬಲ್ಲಿ ಗುಂಡ್ಯ ಹೊಳೆಯ ತಟದಲ್ಲಿ ಕಟ್ಟಿ ಹಾಕಿದ್ದೆವು. ಮಧ್ಯಾಹ್ನ ದನಗಳನ್ನು ತರಲು ತೆರಳಿದಾಗ ಒಂದು ದನದ ಬಾಯಿ ಛಿದ್ರವಾಗಿ ಹೋಗಿ ದನ ನೋವಿನಿಂದ ನರಳುತ್ತಿತ್ತು.

ಈ ಸಂದರ್ಭದಲ್ಲಿ ಸಮೀಪದಲ್ಲಿ ಇದ್ದ ಹಳ್ಳಂಗೇರಿ ನಿವಾಸಿ ದಿ| ಜಾರ್ಜ್ ಎಂಬವರ ಪುತ್ರ ಜೋನಿ ಎಂಬವರನ್ನು ವಿಚಾರಿಸಿದಾಗ “ನಿಮ್ಮ ದನವನ್ನು ಹುಲಿ ಹಿಡಿದಿದೆ, ಹುಲಿ ಓಡಿಸಲು ಕೋವಿ ತರಲು ಬೇರೆಯವರಿಗೆ ಕರೆ ಮಾಡಿದ್ದೇನೆ, ದಯವಿಟ್ಟು ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಆದರೆ ದನದ ಬಾಯಿ ಛಿದ್ರವಾಗಿರುವುದನ್ನು ಕಂಡು ಪೋಲಿಸರಿಗೆ ದೂರು ನೀಡಲಾಗಿದ್ದು, ಸ್ಫೋಟಕ ಸಿಡಿದು ದನದ ಬಾಯಿ ಛಿದ್ರವಾಗಿರುವುದು ಗೊತ್ತಿದ್ದರೂ ಅಲ್ಲಿದ್ದ ಜೋನಿಯವರು ನಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಹೊಳೆ ಬದಿಯಲ್ಲಿ ಹಲವು ಜನ ಕಾಡು ಹಂದಿ ಹಿಡಿಯಲು ನಾಡ ಬಾಂಬ್ ಬಳಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೋಲಿಸರು ಜೋನಿ ಎಂಬವರನ್ನು ವಶಕ್ಕೆ ತೆಗೆದುಕೊಂಡರಾದರೂ ಪ್ರಭಾವಿ ವ್ಯಕ್ತಿಗಳು ಅವರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಾವು ಪೊಲೀಸರಲ್ಲಿ ವಿಚಾರಿಸಿದಾಗ ನಾವು ಎಫ್.ಐ.ಆರ್ ಮಾಡಿದ್ದೆವೆ, ಆದರೆ ಜೋನಿಯವರ ಮೇಲೆ ನಿಖರವಾದ ಸಾಕ್ಷಿ ಇಲ್ಲದಿರುವುದರಿಂದ ಅವರ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸಬೂಬು ನೀಡಿದ್ದಾರೆ.

ಜೋನಿ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಅವರು ಹಾಗೂ ನಾಡ ಬಾಂಬ್ ಗಳನ್ನು ಇರಿಸಿ ಪ್ರಾಣಿ ಹತ್ಯೆ ಮಾಡುತ್ತಿರುವವರನ್ನು ಪತ್ತೆ ಹಚ್ಚಬೇಕು‌. ಇಲ್ಲದಿದ್ದರೆ ಫೆಬ್ರವರಿ 27 ರಂದು ನಾವು ಕಡಬ ಠಾಣೆಯ ಎದುರುಗಡೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ವಿಜಯಲಕ್ಷ್ಮೀ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಾಲಚಂದ್ರ ಸಂಪಡ್ಕ, ಮೋಹನ ಡಿ.ಬಿ, ಸ್ಥಳೀಯರಾದ ಶಿವ ಶಂಕರ್, ಯತೀಶ್, ಪವಿತ್ರ ಮತ್ತಿತರರು ಉಪಸ್ಥಿತರಿದ್ದರು. ಬಾಂಬ್ ಇಟ್ಟು ಹಸುವಿನ ಸಾವಿಗೆ ಕಾರಣವಾದ ಘಟನೆ ಸಂಬಂಧಪಟ್ಟಂತೆ ನಡೆಸಲು ಉದ್ದೇಶಿರುವ ಹೋರಾಟಕ್ಕೆ ಹಿಂದೂ ಸಂಘಟನೆಗಳ ಬೆಂಬಲವಿದೆ ಎಂದು ಕಡಬ ವಿಶ್ವಹಿಂದೂ ಪರಿಷತ್ ಗೌರವಾಧ್ಯಕ್ಷ ಜನಾರ್ಧನ ರಾವ್ ಅಡೂರು, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಜಂಟಿ ಹೇಳಿಕೆ ನೀಡಿದ್ದಾರೆ.

error: Content is protected !!

Join the Group

Join WhatsApp Group