(ನ್ಯೂಸ್ ಕಡಬ) newskadaba.com ಕಡಬ, ಫೆ.23. ದೇಶದಲ್ಲಿನ ಯಾವುದೇ ದೊಡ್ಡ ಶಕ್ತಿಯನ್ನು ಮಟ್ಟಹಾಕುವ ತಾಕತ್ತು ಜನಾಂದೋಲನಕ್ಕೆ ಇದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿದಾಗ ಜಯ ನಮ್ಮದಾಗಲಿದೆ ಎಂದು ಕಡೂರಿನ ಮಾಜಿ ಶಾಸಕ, ಹಿರಿಯ ಹೋರಾಟಗಾರ ವೈ.ಎಸ್.ವಿ ದತ್ತ ಹೇಳಿದರು.
ಅವರು ಸಂವಿಧಾನ ಸಂರಕ್ಷಣಾ ಒಕ್ಕೂಟ ಆತೂರು ಇದರ ವತಿಯಿಂದ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಂವಿಧಾನ ಉಳಿಸಿ – ದೇಶ ರಕ್ಷಿಸಿ ಎಂಬ ಧ್ಯೇಯದೊಂದಿಗೆ ಭಾನುವಾರದಂದು ಆತೂರು ಜಂಕ್ಷನ್ ನಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದೇಶದ ಮೂಲೆ ಮೂಲೆಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದರಿಂದ ಕೇಂದ್ರ ಸರಕಾರವು ತನ್ನ ನಿಲುವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಾಗ ಜಯ ನಮ್ಮದಾಗಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಭಾಸ್ಕರ ಪ್ರಸಾದ್ ಮಾತನಾಡಿ, ನಮ್ಮ ಮಕ್ಕಳನ್ನು ಮಂದಿರದ ಹೆಸರಲ್ಲಿ, ಮಸೀದಿಯ ಹೆಸರಲ್ಲಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ಹಿಂದುತ್ವದ ಅಮಲೇರಿಸುವ ಮೂಲಕ ಸಂಘ ಪರಿವಾರವನ್ನು ಬೆಳೆಸುತ್ತಿದ್ದಾರೆ. ಆದರೆ ಮೇಲುಜಾತಿಯ ಪ್ರಮುಖರ ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿವಿಧ ಕಂಪೆನಿಗಳ ಮುಖ್ಯಸ್ಥರಾಗುತ್ತಿದ್ದಾರೆ. ಈ ಮೂಲಕ ಕೀಳು ಜಾತಿಯವರನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು. ಬೆಂಗಳೂರಿನ ಘಟನೆಯನ್ನು ಉಲ್ಲೇಖಿಸಿದ ಅವರು ಅಮೂಲ್ಯ ಮಾಡಿರುವಂತಹ ಕೃತ್ಯ ತಪ್ಪಾಗಿದ್ದು, ಅದನ್ನು ಸಮರ್ಥಿಸುವುದಲ್ಲಿ ಅರ್ಥ ಇಲ್ಲ. ಇದು ಯಾರೋ ಒಬ್ಬರಿಂದ ಅಥವಾ ಒಬ್ಬರಿಗಾಗಿ ಇರುವ ಹೋರಾಟವಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನಕ್ಕೆ ಧಕ್ಕೆಯಾಗುವ ಕರಾಳ ಕಾನೂನನ್ನು ಒಳಗೊಂಡಿದೆಯಾದರೂ ಈ ಬಗ್ಗೆ ಯಾವುದೇ ಮಾಧ್ಯಮಗಳೂ ವರದಿ ಮಾಡುತ್ತಿಲ್ಲ. ಸೈನ್ಯದ ಮಾಹಿತಿಯನ್ನು ಗುಪ್ತವಾಗಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ 13 ಮಂದಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಧ್ಯಮದಲ್ಲೂ ವರದಿಯಾಗಿಲ್ಲ ಎಂದು ಮಾಧ್ಯಮದ ದ್ವಿಮುಖ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಚೇಳಾಗಳಂತಿರುವ ಕೆಲವು ಮಾಧ್ಯಮಗಳನ್ನು ಬಹಿಷ್ಕರಿಸಿ, ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸತ್ಯವನ್ನು ಹೊರಜಗತ್ತಿಗೆ ತಲುಪಿಸಬೇಕೆಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ ಮೋದಿ ಮತ್ತು ಅಮಿತ್ ಷಾ ರವರು ನ್ಯಾಯಾಂಗವನ್ನು ಬಳಸಿಕೊಂಡು ಹಿಂದೂ ರಾಷ್ಟ್ರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಹಿಟ್ಲರ್ ಮನಸ್ಥಿತಿಯನ್ನು ಹೊಂದಿರುವ ಮೋದಿ ಮತ್ತು ಅಮಿಶ್ ಷಾರನ್ನು ವಿರೋಧಿಸಿದರೆ ದೇಶದ್ರೋಹ ಎಸಗಿದಂತೆ ಎಂದು ನಮ್ಮ ವ್ಯವಸ್ಥೆಯನ್ನು ಅತ್ಯಂತ ಹೀನಸ್ಥಿತಿಗೆ ತಂದಿಟ್ಟಿದ್ದಾರೆ. ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾಗಿರುವ ಕಾಂಗ್ರೆಸ್ ಇಂದು ಪೌರತ್ವ ವಿರೋಧಿ ನೀತಿಯಲ್ಲಿ ಮೌನವಾಗಿದ್ದು, ತನ್ನ ಜವಾಬ್ದಾರಿಯನ್ನೇ ಮರೆತಿದೆ ಎಂದರು.
ಹೋರಾಟಗಾರ ಫಾ| ವಿಲಿಯಂ ಮಾರ್ಟಿಸ್, ಮಾತನಾಡಿ ಕೇಂದ್ರ ಸರಕಾರವು ಹಿಂದೂಗಳಿಗೆ ಬೆನ್ನ ಹಿಂದೆ ಚೂರಿ ಇರಿಯುತ್ತಿದೆ. ಮುಸಲ್ಮಾನ ರಿಗೆ ಮುಂದಿನಿಂದಲೇ ಚೂರಿ ಇಡುತ್ತಿದ್ದು, ಕ್ರೈಸ್ತರಿಗೆ ಕೊಡಲಿಯೇಟು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಅನ್ವರ್ ಸಾದಾತ್, ಹುಸೈನ್ ಮುಈನಿ ಮೂರ್ನಾಡ್, ಕೆ.ಎಂ.ಇಕ್ಬಾಲ್ ಬಾಳಿಲ, ಕೆ.ಟಿ. ಮಧುಸೂದನ ಗೌಡ ಮೊದಲಾದವರು ಮಾತನಾಡಿದರು. ಪ್ರಮುಖರಾದ ಹಾಜಿ ಮೀರಾ ಸಾಹೇಬ್, ಮುಸ್ತಫಾ ಕೆಂಪಿ, ಪಿ.ಡೀಕಯ್ಯ, ಅಬ್ದುಲ್ ಖಾದರ್ ಹಾಜಿ, ಸಯ್ಯದ್ ಜುನೈದ್ ಜಿಫ್ರಿ ತಂಙಳ್, ಸಯ್ಯದ್ ಅನಸ್ ತಂಙಳ್ ಗಂಡಿಬಾಗಿಲು ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಸ್ವಾಗತಿಸಿ, ಅಬ್ದುಲ್ ರಝಾಕ್ ಬಿ.ಕೆ. ವಂದಿಸಿದರು. ನೌಫಲ್ ಕುಡ್ತಮುಗೇರು ಮತ್ತು ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.