(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.17. ಕುಟುಂಬ ಸಂಬಂಧವನ್ನು ಹತ್ತಿರ ಮಾಡಿಕೊಂಡು ಆ ಮೂಲಕ ಸಂಘಟಿತರಾಗಿ ಪರಸ್ಪರ ಸುಖ ದುಃಖಗಳಲ್ಲಿ ಕೈಜೋಡಿಸಿಕೊಂಡು ಬದುಕಿದರೆ ಸಮುದಾಯದ
ಸಬಲೀಕರಣ ಸಾಧ್ಯ ಎಂದು ಪುತ್ತೂರು ನಗರ ಸಭೆಯ ಮಾಜಿ ಸದಸ್ಯ ಹೆಚ್. ಮಹಮ್ಮದ್ ಆಲಿ ಹೇಳಿದರು.
ಅವರು ಫೆ. 16ರಂದು ಆತೂರುನಲ್ಲಿ ಹಫ್ವಾ ಕುಟುಂಬ ಸಮ್ಮಿಲನ-2020 ಸಮಾರಂಭದಲ್ಲಿ ಮಾತನಾಡಿ ಸಮುದಾಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಈ ಮೂಲಕ ಸಮುದಾಯದಲ್ಲಿ ಕಾಡುವ ಇನ್ನಷ್ಟು ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಆತೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಕೆ.ಎಂ.ಎಚ್. ಫಾಝಿಲ್ ಹನೀಫಿ ಉದ್ಘಾಟಿಸಿ ಮಾತನಾಡಿ ಈ ರೀತಿಯ ಕುಟುಂಬ ಸಂಬಂಧ ಕಾರ್ಯಕ್ರಮಗಳು ಎಲ್ಲೆಡೆ ನಡೆದು ಸಮುದಾಯದ ಒಳಿತಿಗೆ ಸಹಕಾರಿ ಆಗಲಿ ಎಂದರು. ಹಫ್ವಾ ಸಮಿತಿಯ ಅಧ್ಯಕ್ಷ ಎನ್. ಇಬ್ರಾಹಿಂ ಹಾಜಿ ಜೇಡರಪೇಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಫ್ವಾ ಫ್ಯಾಮಿಲಿಯ ಸದಸ್ಯರಾಗಿರುವ ಶಮೀರ್ ದಾರಿಮಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಉಳ್ಳಾಲ, ಅಬೂಬಕ್ಕರ್ ಸಿದ್ದಿಕ್ ಕಾಮಿಲಿ, ಎಂ.ಜೆ.ಎಂ. ಮಾಜಿ ಖತೀಬ್ ಮುರ್ಶಿದ್ ಫೈಝಿ ಮಾತನಾಡಿ ಶುಭ ಹಾರೈಸಿದರು. ಉದ್ಯಮಿ ಉಮರ್ ಹಾಜಿ ಕೋಡಿಂಬಾಡಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಜಿ. ಮುಹಮ್ಮದ್ ಕುಂಞಿ, ಗೌರವ ಸಲಹೆಗಾರ ಎ.ಎಂ. ಅಬೂಬಕ್ಕರ್ ಹಾಜಿ, ಹಫ್ವಾ ದುಬೈ, ಸಮಿತಿಯ ಶರೀಫ್ ಬಡ್ಡಮೆ, ಉಬೈದುಲ್ಲಾ ಬಜ್ಪೆ ಉಪಸ್ಥಿತರಿದ್ದರು.
ಬೆಳಗ್ಗೆ ಝಿಯಾರತ್ ಬಳಿಕ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ನಡೆದ ಅಧ್ಯಯನ ಶಿಬಿರವನ್ನು ಕೆಮ್ಮಾರ ಮುದರ್ರಿಸ್ ಇಲ್ಯಾಸ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಕುಂಬ್ರ ಮರ್ಕಝುಲ್ ಹುದಾ ಶರೀಅತ್ ಕಾಲೇಜು ಪ್ರೊಫೇಸರ್ ಹಂಝ ಮದನಿ ಉಸ್ತಾದ್ ಮಿತ್ತೂರು ಸ್ಟಡಿ ಕ್ಲಾಸ್ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ವಿವಿಧ ಮನರಂಜನಾ ಕಾರ್ಯಕ್ರಮಗಳು, ಮಹಿಳೆಯರಿಗೆ ಮೆಹಂದಿ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ 500ಕ್ಕಿಂತ ಹೆಚ್ಚು ಅಂಕ ಗಳಿಸಿದ ಮತ್ತು ವಿಶೇಷ ಸಾಧನೆ ಮಾಡಿರುವ ಹಫ್ವಾ ಕುಟುಂಬದ ಒಟ್ಟು 18 ಮಂದಿಯನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಡಿ.ಎ. ಹಂಝ ಸಖಾಫಿ ಸ್ವಾಗತಿಸಿ, ಹಫ್ವಾ ಯೂತ್ ವಿಂಗ್ ಅಧ್ಯಕ್ಷ ಉಮರ್ ಪಿಲಿಕುಡೆಲ್, ಸದಸ್ಯ ಅಬ್ದುಲ್ ಖಾದರ್ ಬಿ.ಎಸ್. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮುಹಮ್ಮದ್ ತುಫೈಲ್ ವಂದಿಸಿ, ನೌಫಲ್ ಕಾರ್ಯಕ್ರಮ ನಿರೂಪಿಸಿದರು.