(ನ್ಯೂಸ್ ಕಡಬ) newskadaba.com ಕಡಬ, ಫೆ.08. ಭಾರತೀಯ ಮಾಸ್ಟರ್ ಫೆಡರೇಷನ್ ವತಿಯಿಂದ ಗುಜರಾತಿನ ವಡೋದರದಲ್ಲಿ ಫೆಬ್ರವರಿ 5 ರಿಂದ 9 ರವರೆಗೆ ನಡೆದ ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ ಕಡಬದ ಮೋಹನ್ ಕೆರೆಕೋಡಿ 800 ಮೀಟರ್ ಓಟದಲ್ಲಿ ಕಂಚಿನ ಪದಕ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಇದರೊಂದಿಗೆ 2021ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 1 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಕೇರಳದ ಕೋಝಿಕ್ಕೋಡ್ ನಲ್ಲಿ ಮಾಸ್ಟರ್ ಅಸೋಸಿಯೇಷನ್ ನ ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ 1 ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದು ಮಿಂಚಿದ್ದರು. ಶಾಲಾ ದಿನಗಳಲ್ಲಿ ಅವಕಾಶ ವಂಚಿತರಾದರೂ ಆ ನಂತರದ ಅವಕಾಶದ ಸದುಪಯೋಗ ಪಡಿಸಿಕೊಂಡ ಇವರು ತನ್ನ ಸ್ವ ಪ್ರಯತ್ನದ ಮೂಲಕ ಕಳೆದ 3 ತಿಂಗಳಿನಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟು 14 ಪದಕ ಪಡೆದಿರುವುದು ಇವರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ.
2005ರಲ್ಲಿ ಶ್ರೀ ರಾಮ ಯುವಕ ಮಂಡಲ ಕಡಬ ಎಂಬ ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿ ಹಗ್ಗಜಗ್ಗಾಟ ತಂಡವೊಂದನ್ನು ಕಟ್ಟಿ ಬೆಳೆಸಿ ಇದುವರೆಗೆ ಎಲ್ಲರ ಸಹಕಾರದೊಂದಿಗೆ 99 ಪ್ರಶಸ್ತಿಗಳನ್ನು ಪಡೆದ ತಂಡದ ನಾಯಕನಾಗಿಯೂ ಮಿಂಚಿದವರು. ಸಂಘಟನಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಇವರು ಶ್ರೀ ರಾಮ ಸೇನೆ ಕಡಬ ತಾಲೂಕಿನ ಅಧ್ಯಕ್ಷರಾಗಿ, ಗೌಡ ಸೇವಾ ಸಂಘದ ಕ್ರೀಡಾ ಸಂಚಾಲಕನಾಗಿ, ಇತ್ತೀಚೆಗೆ ನಡೆದ ಪುತ್ತೂರು – ಕಡಬ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಡಬ ವಲಯವನ್ನು ಚಾಂಪಿಯನ್ ಆಗಿಸಿದ ಹೆಗ್ಗಳಿಕೆ ಇವರದು.