(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶಕ್ತಿ ,ಚೈತನ್ಯ, ಚಟುವಟಿಕೆಯ ಮೂಲ ಶಕ್ತಿಯಾದ ಸೂರ್ಯನ ಆರಾಧನೆ ಮಾಡುವುದರಿಂದ ಆರೋಗ್ಯ ಸುಧಾರಣೆಯಾಗಿ, ಆಯಸ್ಸು ವೃದ್ಧಿಯಾಗುತ್ತದೆ, ಅರುಣೋದಯ ಕಾಲ ಎಂದರೆ ನಾವು ಶಕ್ತಿ ಸಂಚಯನ ಮಾಡಿಕೊಳ್ಳುವ ಸಮಯ ಎಂದು ಕರುಣಾಕರ ಗೋಗಟೆ ನಾಡೋಳಿ ತಿಳಿಸಿದರು.
ಅವರು ಸರಸ್ವತೀ ಸಮೂಹ ಸಂಸ್ಥೆಗಳು ಕಡಬ, ಇಲ್ಲಿ ರಥ ಸಪ್ತಮಿಯ ಪ್ರಯುಕ್ತ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಸೂರ್ಯನ ಆರಾಧನೆಯಿಂದ ನಮ್ಮ ಮನಸ್ಸನ್ನು ನಿಗ್ರಹಿಸಿಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಸಂಸ್ಥೆಯ ಸಂಚಾಲಕ ಯೋಗಪಟು ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿ, ಪ್ರಕೃತಿಯ ಜೊತೆಗಿನ ಒಡನಾಟದಿಂದ ಸಮಯ ಹಾಗೂ ಕಾಲಗಳ ಬದಲಾವಣೆ ಅರ್ಥ ಮಾಡಿಕೊಂಡು ಬದುಕುವ ಜಾಣ್ಮೆಯನ್ನು ನಾವು ಗಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಕೋಶಾಧಿಕಾರಿ ಲಿಂಗಪ್ಪ ಜೆ. ಮಾತನಾಡಿ ಸೂರ್ಯನ ಕಿರಣಗಳಿಂದ ನಮ್ಮ ಆರೋಗ್ಯಕ್ಕೆ ಸ್ವಾಭಾವಿಕವಾಗಿ ಸಿಗುವ ಪೌಷ್ಠಿಕಾಂಶಗಳನ್ನು ತಪ್ಪಿಸಿಕೊಳ್ಳಬಾರದು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಅಗ್ನಿಹೋತ್ರ ನೆರವೇರಿಸಿ , ಮಂತ್ರ ಸಹಿತ ಸಾಮೂಹಿಕ ಸೂರ್ಯ ನಮಸ್ಕಾರ ನೆರವೇರಿಸಿದರು. ಕಾಲೇಜು ವಿಭಾಗದ ಪ್ರಾಂಶುಪಾಲರಾದ ಮಹೇಶ ನಿಟಿಲಾಪುರ ಸ್ವಾಗತಿಸಿ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ವಂದಿಸಿ, ಸೌಮ್ಯ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥ ಮಾಧವ ಕೋಲ್ಪೆ , ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.