ಬೆಂಗಳೂರು, ಜ.22: “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ‘ರಾವ್’ ಆಗಿರೋದ್ರಿಂದ ಬಿಜೆಪಿಗೆ ಸಂತಸವಾಗಿಲ್ಲ, ಬಂಧಿತ ರಾವ್ ಆಗಿರದೆ ಓರ್ವ ಮುಸ್ಲಿಂ ವ್ಯಕ್ತಿಯಾಗಿದಿದ್ದರೆ ಬಿಜೆಪಿ ನಾಯಕರ ವರ್ತನೆಯೇ ಬದಲಾಗುತ್ತಿತ್ತು” ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಆದಿತ್ಯ ರಾವ್ ಬದಲಾಗಿ ಬಂಧಿತ ಮುಸ್ಲಿಂ ಸಮುದಾಯದ ವ್ಯಕ್ತಿಯಾಗಿದ್ದರೆ ಇಂದು ಬಿಜೆಪಿ ನಾಯಕರ ವರ್ತನೆಯಲ್ಲಿ ಬದಲಾವಣೆ ಇರುತ್ತಿತ್ತು, ಜೊತೆಗೆ ಹಲವು ಹೇಳಿಕೆಗಳು ಹೊರಬೀಳುತ್ತಿದ್ದವು” ಎಂದು ಹೇಳಿದ್ದಾರೆ.
“ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಎಂ.ಎಂ ಕಲಬುರಗಿ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದು ಪತ್ತೆಯಾಗಿದೆ. ಬಂಧಿತ ಮುಸ್ಲಿಂ ವ್ಯಕ್ತಿಯಾಗಿದ್ದರೆ ಇಷ್ಟೊತ್ತಿಗೆ ದೊಡ್ಡ ರಂಪಾಟ ಸೃಷ್ಟಿ ಮಾಡಿ ದೇಶದ್ರೋಹಿಗಳು ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ರಾವ್ ಬಂಧನದ ಬಳಿಕ ಬಿಜೆಪಿಯವರಿಗಂತೂ ದೊಡ್ಡ ಡ್ಯಾಮೇಜ್ ಆಗಿದೆ. ಅವರಿಗೆ ಬಾಯಿ ತೆರೆಯಲು ಅವಕಾಶವೇ ಸಿಕ್ಕಿಲ್ಲ” ಎಂದು ಅಣಕಿಸಿದರು. “ದೇಶದಲ್ಲಿ ಬಿಜೆಪಿ ಪಕ್ಷ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಹಿಂಸೆ, ದ್ವೇಷಕ್ಕೆ ಇವರೇ ಪ್ರೋತ್ಸಾಹ ಕೊಡುತ್ತಿದ್ದಾರೆ” ಎಂದು ಆರೋಪಿಸಿದರು.