ಬೆಂಗಳೂರು, ಜ.22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿಯಾಗಿದ್ದ ಆದಿತ್ಯ ರಾವ್ ಎಂಬಾತ ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ಐಜಿಪಿ ನೀಲಮಣಿ ರಾಜು ಅವರ ಎದುರು ಶರಣಾಗಿದ್ದಾನೆ.
ಆದಿತ್ಯ ರಾವ್‌ನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆತಂದಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ನಾನೇ ಎಂದು ಆದಿತ್ಯ ರಾವ್ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸರ ತಂಡವು ಬೆಂಗಳೂರಿಗೆ ತೆರಳಿ ಆತನ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಪಿ.ಎಸ್.ಹರ್ಷ ಅವರು ತಿಳಿಸಿದ್ದಾರೆ.
ಆರೋಪಿ ಆದಿತ್ಯ ರಾವ್ ಎಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರನಾಗಿದ್ದು,ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಕೆಲವೊಂದು ತಾಂತ್ರಿಕ ಕಾರಣದಿಂದ ಆತನ ಅರ್ಜಿ ವಜಾಗೊಂಡಿತ್ತು.
ಇದೇ ಕೋಪದಲ್ಲಿ 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್ ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಪೋಟ ನಡೆಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ , ಬಂಧನಕ್ಕೆ ಒಳಗಾಗಿದ್ದನು .
ಈತ ಒಟ್ಟು ಮೂರು ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡಿದ್ದ ಆರೋಪದಲ್ಲಿ 2018ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಬಳಿಕ ಜೈಲುವಾಸ ಅನುಭವಿಸಿದ್ದ.