ತೊಕ್ಕೊಟ್ಟು, ಜ.20: ದೋಣಿ ಮಗುಚಿಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿ, ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲದ ಉಳಿಯ ಹೊಯ್ಗೆ ಎಂಬಲ್ಲಿ ನಡೆದಿದೆ.
ಮೃತರನ್ನು ಮೀಯಪದವು ನಿವಾಸಿ ರೆನಿಟಾ(18) ಎಂದು ಗುರುತಿಸಲಾಗಿದೆ. ಈಕೆ ಮಿಲಾಗ್ರಿಸ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ಅಂತಿಮ ಪದವಿಯ ವಿದ್ಯಾರ್ಥಿನಿಯಾಗಿದ್ದಳು.
ತೊಕ್ಕೊಟ್ಟು ಚರ್ಚ್ ವಾರ್ಷಿಕೋತ್ಸವ ಪ್ರಯುಕ್ತ ಉಳಿಯ ಹೊಯ್ಗೆಯಲ್ಲಿರುವ ಜಾರ್ಜ್ ಎಂಬವರ ಮನೆಗೆ ಅವರ ಮಕ್ಕಳ ಸಹಪಾಠಿ ಐವರು ವಿದ್ಯಾರ್ಥಿನಿಯರು ಅತಿಥಿಯಾಗಿ ಆಗಮಿಸಿದ್ದರು. ಮಧ್ಯಾಹ್ನ ಊಟ ಮುಗಿಸಿದ ವಿದ್ಯಾರ್ಥಿನಿಯರು ಜಾರ್ಜ್ ಅವರಲ್ಲಿ ದೋಣಿ ವಿಹಾರ ನಡೆಸುವಂತೆ ಕೋರಿದ್ದು, ಅದರಂತೆ ಅವರ ಮಗಳು ಸೇರಿದಂತೆ ಐವರು ವಿದ್ಯಾರ್ಥಿನಿಯರನ್ನು ಜಾರ್ಜ್ ದೋಣಿ ಮೂಲಕ ನೇತ್ರಾವತಿ ನದಿ ತೀರದಲ್ಲಿ ಸುತ್ತಾಡಿಸಲು ತೆರಳಿದ್ದರು.
ದಡದಿಂದ ಕೆಲ ಮೀ. ದೂರದಲ್ಲಿ ದೋಣಿ ಸಾಗುತ್ತಿದ್ದಂತೆ ಜೋರಾಗಿ ಬೀಸುತ್ತಿದ್ದ ಗಾಳಿಗೆ ಮಗುಚಿ ಬಿದ್ದಿದೆ. ಪರಿಣಾಮ ಜಾರ್ಜ್ ಸೇರಿದಂತೆ ಆರು ಮಂದಿ ವಿದ್ಯಾರ್ಥಿನಿಯರು ನೀರಿಗೆ ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯ ನಿವಾಸಿ ಮಾರ್ಟಿನ್ , ಡೇವಿಡ್ ಹಾಗೂ ಇತರರು ಈಜಿ ದೋಣಿಯತ್ತ ಸಾಗಿ ಮೊದಲಿಗೆ ಮೂವರು ಮತ್ತೆ ಇಬ್ಬರನ್ನು ದಡ ಸೇರಿಸಿದ್ದಾರೆ. ಆದರೆ ರೆನಿಟಾ ಸೇರಿದಂತೆ ಇಬ್ಬರು ಆಳವಾಗಿ ಮುಳುಗಿದ್ದರಿಂದಾಗಿ ದಡ ಸೇರಿಸುವಾಗ ಗಂಭೀರ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ರೆನಿಟಾ ಸಾವನ್ನಪ್ಪಿದ್ದಾಳೆ. ಜಾರ್ಜ್ ಅವರು ದೋಣಿ ಮಗುಚಿ ಬೀಳುತ್ತಿದ್ದಂತೆ ನೀರಿನಲ್ಲಿ ಈಜುತ್ತಲೇ ದಡ ಸೇರಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.