ಎನ್‌ಆರ್‌ಸಿಯಿಂದ ಹಿಂದೂಗಳಿಗೂ ಗಂಡಾಂತರ: ಬಿಜೆಪಿ ಬೆಂಬಲಿಗರ ಆತಂಕ

ಹೊಸದಿಲ್ಲಿ, ಜ.20: ವಿವಾದಾತ್ಮಕ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ತೊಂದರೆಗೆ ಒಳಗಾಗುವವರು ಕೇವಲ ಮುಸ್ಲಿಮರು ಮಾತ್ರವಲ್ಲ, ಬಹುತೇಕ ಹಿಂದೂಗಳಿಗೂ ಇದು ಸಮಸ್ಯೆ ತಂದೊಡ್ಡಲಿದೆ ಎಂದು ಈಗ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರಕಾರದ ನಿಷ್ಟಾವಂತ ಬೆಂಬಲಿಗರಿಗೂ ಮನವರಿಕೆ ಆಗುತ್ತಿದೆ ಎನ್‌ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ.

ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿಯಿಂದ ಹೊಸ ಸಮಸ್ಯೆ ಉದ್ಭವಿಸಲಿದೆ ಎಂದು ಈ ನಿಷ್ಟಾವಂತ ಬೆಂಬಲಿಗರೂ ಈಗ ಬಹಿರಂಗವಾಗಿ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಬಲಿಷ್ಟರಿಗೆ ಮಾತ್ರ ಅನುಕೂಲವಾಗಲಿದೆ. ಪ್ರಭಾವೀ ವ್ಯಕ್ತಿಗಳು ಅಥವಾ ಅಧಿಕಾರದಲ್ಲಿರುವವರ ಸಂಪರ್ಕದಲ್ಲಿದ್ದವರು ಯಾವುದೇ ದಾಖಲೆ ಪತ್ರವಿಲ್ಲದೆ ಅಥವಾ ಅವರು ಒದಗಿಸುವ ದಾಖಲೆಯನ್ನು ಪೌರತ್ವ ಸಾಬೀತುಪಡಿಸುವ ಪುರಾವೆ ಎಂದು ಒಪ್ಪಿಕೊಳ್ಳಬೇಕಾಗಬಹುದು. ಆದರೆ ಸಾಮಾನ್ಯ ಜನತೆ, ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ, ಲಂಚ ನೀಡಲು ಅಸಮರ್ಥನಾದರೆ ‘ಸಂದೇಹಾಸ್ಪದ’ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಂಧನ ಕೇಂದ್ರದ ಪಾಲಾಗುವ ಅಪಾಯವಿದೆ ಎಂದು ಬಿಜೆಪಿ ನಿಷ್ಟಾವಂತರಲ್ಲೇ ಈಗ ತಳಮಳ ಆರಂಭವಾಗಿದೆ ಎಂದು ಹೆಸರು ತಿಳಿಸಲಿಚ್ಛಿಸದ ಬಿಜೆಪಿ ಮುಖಂಡರು ತಿಳಿಸಿರುವುದಾಗಿ ವರದಿಯಾಗಿದೆ.

Nk Kukke

‘ಎನ್‌ಆರ್‌ಸಿ ಪ್ರಕ್ರಿಯೆಯಿಂದ ಕೆಳಹಂತದ ಭ್ರಷ್ಟ ಅಧಿಕಾರಿಗಳ ಕೈಯಲ್ಲಿ ಎಲ್ಲರೂ ಒದ್ದಾಡುವ ಪರಿಸ್ಥಿತಿ ಬರುತ್ತದೆ. ಅವರು ಬೃಹತ್ ಮೊತ್ತದ ಲಂಚ ಕೇಳುತ್ತಾರೆ. ಲಂಚ ನೀಡದಿದ್ದರೆ ನಿಮ್ಮನ್ನು ಅನರ್ಹ ಮಾಡುವುದಾಗಿ ಬೆದರಿಸುತ್ತಾರೆ. ನ್ಯಾಯ ವ್ಯವಸ್ಥೆ ಮುರಿದು ಬಿದ್ದ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಪಡುವ ನೋವಿಗೆ ಎಣೆಯಿಲ್ಲದಾಗುತ್ತದೆ’ ಎಂದು ಬಿಜೆಪಿಯ ಬಗ್ಗೆ ಮೃದುಧೋರಣೆ ಹೊಂದಿರುವ, ಬಿಜೆಪಿಯ ಟ್ರೋಲ್ ಎಂದೇ ಹೆಸರಾಗಿರುವ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

Also Read  ಮುಂದಿನ ತಿಂಗಳು ಎಲ್‌ಪಿಜಿ ದರದಲ್ಲಿ ಇಳಿಕೆ: ಸಚಿವ ಪ್ರಧಾನ್

ಭಾರತದ ಬಹುಸಂಖ್ಯಾತ ಸಮುದಾಯಕ್ಕೆ ಎದುರಾಗಲಿರುವ ಕಿರುಕುಳದ ಕುರಿತ ವಿಶ್ಲೇಷಣೆ ಬಹುತೇಕ ಹಿಂದೂಗಳಲ್ಲಿ ಕಳವಳ ಮೂಡಿಸಿದೆ. ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಪ್ರಕ್ರಿಯೆಯ ಹೆಸರು ಕೇಳಿದೊಡನೆ ದೇಶದ ಪ್ರಜೆಗಳಲ್ಲಿ ಭಯ ಮೂಡುವ ಪರಿಸ್ಥಿತಿಯಿದೆ. ಪೌರತ್ವ ಸಾಬೀತುಪಡಿಸುವ ದಾಖಲೆ, ಜನನ ಪ್ರಮಾಣಪತ್ರ ಅಧಿಕಾರಿಗಳಿಗೆ ಸಮ್ಮತವಾಗಿದ್ದರೆ ಸಮಸ್ಯೆಯಿಲ್ಲ. ಆದರೆ ಅಧಿಕಾರಿಗಳು ಒಂದು ವೇಳೆ ಯಾವುದೋ ಕಾರಣ ನೀಡಿ ಪೌರತ್ವದ ಬಗ್ಗೆ ಸಂದೇಹ ವ್ಯಕ್ತಪಡಿಸಿದರೆ ಆಗ ಬಂಧನ ಕೇಂದ್ರದ ಪಾಲಾಗುವ ಭೀತಿ ಅಲ್ಪಸಂಖ್ಯಾತರಲ್ಲಷ್ಟೇ ಅಲ್ಲ, ಬಹುಸಂಖ್ಯಾತ ಹಿಂದೂಗಳ ಮನದಲ್ಲೂ ಮೂಡಿದೆ. ಅಲ್ಲದೆ ಪೌರತ್ವ ನಿರಾಕರಿಸಿದರೆ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಲು ಕನಿಷ್ಟ 20 ವರ್ಷ ಬೇಕಾಗುತ್ತದೆ. ಅದುವರೆಗೆ ಬಂಧನ ಕೇಂದ್ರವೇ ಗತಿಯಾಗಲಿದೆ ಎಂಬ ಆತಂಕ ದೇಶವಾಸಿಗಳಲ್ಲಿ ಮನೆ ಮಾಡಿದೆ.

ಅಧಿಕಾರಿಗಳಿಗೆ ಇಷ್ಟೊಂದು ಅಧಿಕಾರ ನೀಡುವುದು ಅಪಾಯಕಾರಿ ಎಂದು ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ. “ನೋಡು, ಅನರ್ಹರ ಪಟ್ಟಿ ತಯಾರಿಸುವ ಅಧಿಕಾರಿ ನಾನು. ಸಂದೇಹಾಸ್ಪದ ವ್ಯಕ್ತಿಗಳ ಪಟ್ಟಿಯಲ್ಲಿ ನಿನ್ನ ಹೆಸರೂ ಸೇರ್ಪಡೆಯಾಗಬಾರದು ಎಂದಾದರೆ ನನಗೆ ಇಷ್ಟು ಹಣ ನೀಡಬೇಕು” ಎಂದು ಬೆದರಿಸುವ ಸನ್ನಿವೇಶಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

Also Read  ದೇಶದಲ್ಲಿ 'H3N2' ಜೊತೆಗೆ 'H1N1' ಪ್ರಕರಣಗಳಲ್ಲಿ ಹೆಚ್ಚಳ       ➤ ಆರೋಗ್ಯ ಸಚಿವಾಲಯ  

ಕೇಂದ್ರ ಸರಕಾರ ಪ್ರಸ್ತಾವಿಸಿರುವ ಪ್ರಕ್ರಿಯೆ ಸ್ವಯಂವೈಫಲ್ಯದ ಜೊತೆಗೆ ಅರ್ಥಹೀನವಾಗಿದ್ದು ದೇಶವನ್ನು ಕಂಗೆಡಿಸಿರುವ ಮತ್ತು ತುರ್ತು ಗಮನ ನೀಡಬೇಕಾಗಿರುವ ಆರ್ಥಿಕ ಪ್ರಗತಿಯ ಮಂದಗತಿಯಿಂದ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ ಎಂದು ಬಹುತೇಕರ ಅಭಿಪ್ರಾಯವಾಗಿದೆ.

ಲಂಚಕ್ಕೆ ದರ ನಿಗದಿ: ಚೇತನ್ ಭಗತ್

ಸರಕಾರಿ ಅಧಿಕಾರಿಗಳು ಹೆಚ್ಚುವರಿ ಅಧಿಕಾರವನ್ನು ಆನಂದಿಸಲಿದ್ದಾರೆ. ಬಳಿಕ ಒಂದು ‘ದರ’ ನಿಗದಿಯಾಗಲಿದೆ. ಮಾನದಂಡ ಕಠಿಣವಾದಷ್ಟೂ ‘ದರ’ ಅಧಿಕವಾಗಲಿದೆ. ನೀವು ಈ ನಿಗದಿತ ದರವನ್ನು ನೀಡಲು ಸಾಧ್ಯವಾಗದಿದ್ದಲ್ಲಿ ಸರಕಾರಿ ಅಧಿಕಾರಿಗಳು ನಿಮ್ಮ ನೈಜ ಜನನ ಪತ್ರವನ್ನು ಮುಲಾಜಿಲ್ಲದೆ ತಿರಸ್ಕರಿಸಲಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯ ಪಡೆಯಬೇಕಿದ್ದರೆ ಸುಮಾರು 20 ವರ್ಷ ಹಿಡಿಯಬಹುದು ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆದಿರುವ ಲೇಖನದಲ್ಲಿ ಖ್ಯಾತ ಲೇಖಕ ಚೇತನ್ ಭಗತ್ ಅಭಿಪ್ರಾಯಪಟ್ಟಿದ್ದಾರೆ.

error: Content is protected !!
Scroll to Top