ಬೆಂಗಳೂರು, ಜ.10: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಜಾರ್ಖಂಡ್ ನಲ್ಲಿ ಕರ್ನಾಟಕದ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿ (44) ಎಂದು ಗುರುತಿಸಲಾಗಿದೆ.
ಗೌರಿ ಲಂಕೇಶ್ ಹತ್ಯೆಯಲ್ಲಿ ಬಳಸಲಾಗಿದ್ದ ಪಿಸ್ತೂಲ್ ಅನ್ನು ಈತ ನಾಶಪಡಿಸಿದ್ದಾನೆ ಎನ್ನಲಾಗಿದ್ದು, ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಈತ ತಲೆಮರೆಸಿಕೊಂಡಿದ್ದು, ಎರಡೂ ವರ್ಷಗಳ ಬಳಿಕ ಕೊನೆಗೂ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ಜಿಲ್ಲೆಯಲ್ಲಿರುವ ಖತ್ರಾಸ್ ಎಂಬ ಹಳ್ಳಿಯಲ್ಲಿ ಈತನನ್ನು ಬಂಧಿಸಲಾಗಿದ್ದು, ಆತ ಇದ್ದ ಮನೆಯಲ್ಲಿ ಶೋಧ ನಡೆಸಿದ ವೇಳೆ ಕೆಲವು ವಸ್ತುಗಳು ದೊರೆತಿದ್ದು ಅದನ್ನು ವಶಕ್ಕೆ ಪಡೆಯಾಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಿಷಿಕೇಶ್ ಅನ್ನು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ನಂತರ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತದೆ ಎಂದು ತಿಳಿದುಬಂದಿದೆ.