ಗಣರಾಜ್ಯೋತ್ಸವ : ಸರಕಾರಿ ನೌಕರರ ಹಾಜರಾತಿ  ಕಡ್ಡಾಯ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.10  ಜನವರಿ 26 ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಗರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸರಕಾರಿ ನೌಕರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಸೂಚನೆ ನೀಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಸಿಬ್ಬಂದಿಗಳ ಹಾಜರಾತಿ ಪಡೆದು ನೀಡಲು ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚಿಸಿದರು.


ಜನವರಿ 26 ರಂದು ಬೆಳಗ್ಗಿನ ಕಾರ್ಯಕ್ರಮ ನೆಹರು ಮೈದಾನದಲ್ಲಿ ಹಾಗೂ ಸಂಜೆಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಂಗಳೂರು ಪುರಭವನದಲ್ಲಿ ನಡೆಸಲು ತೀರ್ಮಾನಿಸಿದ್ದು, ಮುಖ್ಯ ಅತಿಥಿಯಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ವಿವಿಧ ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಒಬ್ಬರನ್ನು ಗುರುತಿಸಿ ಸರ್ವೋತ್ತಮ ಪ್ರಶಸ್ತಿಯನ್ನು ನೀಡಲಾಗುವುದು. ಅವರ ಸಾಧನೆಯ ವಿವರಗಳನ್ನು ಜನವರಿ 18 ರ ಒಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು ಎಂದು ಹೇಳಿದರು. ನೆಹರು ಮೈದಾನದ ಶುಚಿತ್ವ, ಪ್ರವೇಶದ್ವಾರದ ಇಕ್ಕೆಲೆಗಳಲ್ಲಿ ಶಾಮಿಯಾನದ ವ್ಯವಸ್ಥೆ ಹಾಗೂ ಪಥಸಂಚಲನ ನಡೆಯುವ ಟ್ಯ್ರಾಕ್‍ನಲ್ಲಿ ಕಲ್ಲು ಮುಳ್ಳುಗಳಿರದಂತೆ ಸ್ವಚ್ಚಗೊಳಿಸಿ ರೋಡ್ ರೋಲರ್ ಉಪಯೋಗಿಸಿ ಉಪಯುಕ್ತವಾಗಿಡುವಂತೆ ಅವರು ಸೂಚಿಸಿದರು. ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಎಲ್ಲಾ ಇಲಾಖಾಧಿಕಾರಿಗಳಿಗೆ ತಮ್ಮ ತಮ್ಮ ಕಟ್ಟಡಕ್ಕೆ ಅಲಂಕಾರಿಕಾ ದೀಪಗಳನ್ನು ಅಳವಡಿಸುವಂತೆ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾತಂಡಗಳು ಪ್ರದರ್ಶನ ನೀಡುವ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಣುಕು ಪ್ರದರ್ಶನವನ್ನು ಜನವರಿ 18ರ ಒಳಗೆ ನೀಡಬೇಕು ಹಾಗೂ ಇಲಾಖೆಯ ಸಮಿತಿ ಅಧ್ಯಕ್ಷರು ತಮಗೆ ವಹಿಸಿದ ಕೆಲಸದ  ವರದಿಯನ್ನು ಜನವರಿ 22ರ ಒಳಗೆ ಸಲ್ಲಿಸಬೇಕು ಎಂದು ಹೇಳಿದರು. ಯಾವುದೇ ರೀತಿಯ ಕುಂದುಕೊರತೆ, ಲೋಪದೋಷಗಳಿಲ್ಲದೇ ಸುಸಜ್ಜಿತವಾಗಿ ಎಲ್ಲರ ಸಂಪೂರ್ಣ ಸಹಕಾರದೊಂದಿಗೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ  ಡಿಸಿಪಿ ಅರುಣಾಂಶ್ ಗಿರಿ, ಮಂಗಳೂರು ಉಪವಿಭಾಗಧಿಕಾರಿ ಮದನ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Also Read  ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದ ಬಸ್ ➤ ಪ್ರಯಾಣಿಕರಿಗೆ ಗಾಯ

error: Content is protected !!
Scroll to Top