ಬಂಟ್ವಾಳ, ಜ.9: ಯಾವುದೇ ನಾಮಫಲಕ ಹಾಕದೆ ರಸ್ತೆಯ ಕಾಮಗಾರಿ ನಡೆಸುತ್ತಿರುವ ಪರಿಣಾಮ ಕಾರೊಂದು ಕಿರು ಸೇತುವೆಯ ನಿರ್ಮಾಣದ ಗುಂಡಿಗೆ ಬಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.
ಗಾಯಗೊಂಡವರನ್ನು ಕಾರು ಚಾಲಕ ರಾಜೇಶ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ರಾಜೇಶ್ ಬಂಟ್ವಾಳ ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ರಸ್ತೆ ಕಾಣದೆ ಕಾರು ಗುಂಡಿಗೆ ಬಿದ್ದಿದೆ. ಬಿ.ಸಿರೋಡು – ಪುಂಜಾಲಕಟ್ಟೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಯಾವುದೇ ಮುನ್ಸೂಚನೆಯ ಫಲಕ ಹಾಕದೇ ಇರುವುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಕಾರು ಗುಂಡಿಗೆ ಬಿದ್ದ ಬಳಿಕ ಗುರುವಾರ ಬೆಳಿಗ್ಗೆ ಆ ಭಾಗದಲ್ಲಿ ಬ್ಯಾರಿಕೇಡ್ ಪ್ರತ್ಯಕ್ಷವಾಗಿದೆ.
ಪುಂಜಾಲಕಟ್ಟೆ – ಬಿಸಿರೋಡು ರಸ್ತೆ ಅಗಲೀಕರಣ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿದ್ದು, ರಸ್ತೆಯ ಮಾರ್ಗಸೂಚಿ ಸೂಚನಾ ಫಲಕಗಳಾಗಲಿ, ಬ್ಯಾರಿಕೇಡ್ ಹಾಕದೆ ವಾಹನ ಸವಾರರು “ರಸ್ತೆ ಎಲ್ಲಿದ , ಕಾಮಗಾರಿ ಎಲ್ಲಿ ನಡೆಯುತ್ತಿದೆ ” ಎಂದು ಗೊಂದಲಕ್ಕೊಳಗಾಗುತ್ತಿದ್ದಾರೆ. ಅಪಘಾತಗಳಂತಹ ಅನೇಕ ಘಟನೆಗಳು ಕಾಮಗಾರಿಯ ಸಂದರ್ಭದಲ್ಲಿ ನಡೆಯುತ್ತಿದ್ದು, ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಹಾಗೂ ಸಂಬಂಧಿಸಿದಂತೆ ಇಲಾಖೆ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಕ್ರಮಕೈಗೊಳ್ಳುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.