ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯ ಯೋಜನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.9   ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ  ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.


ಒಂದು ಭಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ). ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ರೂ.3,00,000 ಹೊಂದಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿರಬೇಕು. ಅರ್ಜಿದಾರರ ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.

ಅವಧಿಸಾಲ ಯೋಜನೆಗಳು: ಕೃಷಿ ಮತ್ತು ಕೃಷಿ ಅವಲಂಭಿತ ಚಟುವಟಿಕೆಗಳಿಗೆ, ಸಣ್ಣ ವ್ಯಾಪಾರ/ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲಕರ್ಮಿಗಳಿಗೆ, ಸೇವಾ ವಲಯ, ಸಾರಿಗೆ ವಲಯದಲ್ಲಿ (ಆಟೋರಿಕ್ಷ/ಗೂಡ್ಸ್ ಆಟೋರಿಕ್ಷ) ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಉದ್ಯಮ/ಕೋರ್ಸ್‍ಗಳಲ್ಲಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೋದಿತ ಘಟಕ ವೆಚ್ಚದ ಮಿತಿಗೊಳಪಟ್ಟು ಗರಿಷ್ಠ ರೂ.15.00ಲಕ್ಷ ಗಳವರೆಗೆ ವಾರ್ಷಿಕ ಶೇಕಡ 6 ರಿಂದ 8ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುತ್ತದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ: ಎಐಸಿಟಿಇ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಯುಜಿಸಿ ಮುಂತಾದ ನೊಂದಾಯಿತ ಏಜೆನ್ಸಿಗಳು ಮತ್ತು ಅನುಮೋದಿತ ಹೊಂದಿದ ವೃತ್ತಿಪರ ತಾಂತ್ರಿಕ ಕೋರ್ಸ್‍ಗಳಲ್ಲಿ ಅರ್ಹತ ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕಪಡೆದು ಪ್ರವೇಶ ಹೊಂದಿದ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.15 ಲಕ್ಷ ಅಥವಾ ಕೋರ್ಸ್‍ನ ಅವಧಿಗೆ ಒಟ್ಟು ಶೇ.4ರ ಬಡ್ಡಿ ದರದಲ್ಲಿ ರೂ.15 ಲಕ್ಷ ಸಾಲ ಮಂಜೂರು ಮಾಡಲಾಗುತ್ತದೆ. ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ರೂ.20 ಲಕ್ಷ ಸಾಲ ಶೇ.4ರ ಬಡ್ಡಿದರ ಹಾಗು ವಿದ್ಯಾರ್ಥಿನಿಯರಿಗೆ ಶೇ.3.5ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
ನ್ಯೂ ಸ್ವರ್ಣಿಮಾ  ಯೋಜನೆ: ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ಶೇ.5ರ ಬಡ್ಡಿ ದರದಲ್ಲಿ ರೂ.2 ಲಕ್ಷ ಸಾಲ ಪಡೆದುಕೊಳ್ಳಬಹುದು.
ಮೈಕ್ರೋ ಫೈನಾನ್ಸ್ ಸಾಲ ಯೋಜನೆ: ಗರಿಷ್ಠ 20 ಸದಸ್ಯರನ್ನೊಳಗೊಂಡ ಹಿಂದುಳಿದ ವರ್ಗಗಳ ಸ್ವ ಸಹಾಯ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ಶೇ. 5ರ ಬಡ್ಡಿ ದರದಲ್ಲಿ ರೂ.1 ಲಕ್ಷ ಸಾಲ ಪಡೆಯಬಹುದು.
ಮಹಿಳಾ ಸಮೃದ್ಧಿ  ಯೋಜನೆ: ಗರಿಷ್ಠ 20 ಸದಸ್ಯರನ್ನೊಳಗೊಂಡ ಹಿಂದುಳಿದ ವರ್ಗಗಳ ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35 ಸಾವಿರ ಸಾಲ ಶೇ. 4ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಚಿಕ್ಕ ಸಾಲ ಯೋಜನೆ: ಹಿಂದುಳಿದ ವರ್ಗಗಳ ಜನರು  ಸ್ವಯಂ ಉದ್ಯೋಗ ಕೈಗೊಳ್ಳಲು ಸಣ್ಣ ವ್ಯಾಪಾರ ಕೈಗೊಳ್ಳಲು ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.1 ಲಕ್ಷ  ಸಾಲ ಶೇ.6ರ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು.

Also Read  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧಾ ವಿಜೇತರ ಆಯ್ಕೆ

ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು, ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ  ಕಚೇರಿಯಲ್ಲಿ ಅಥವಾ ನಿಗಮದ ವೆಬ್ ಸೈಟ್ ನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಭವನ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಇಲ್ಲಿಗೆ  ಜನವರಿ 31 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್  ಸಂಪರ್ಕಿಸಬಹುವುದು ಎಂದು ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Also Read  ಪೊಳಲಿ: ಶ್ರಿ ರಾಜಾರಾಜೇಶ್ವರಿ ಸನ್ನಿಧಿಯಲ್ಲಿ ► ಕೆನರಾ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕರಸೇವೆ

error: Content is protected !!
Scroll to Top