ಮಂಗಳೂರು, ಜ.9: ನಿವೃತ್ತ ರೋಟರಿ ಡಿಸ್ಟಿಕ್ ಗವರ್ನರ್ ಸೂರ್ಯಪ್ರಕಾಶ್ ಭಟ್ (62) ಅಲ್ಪಕಾಲದ ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಎರಡು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೂರ್ಯಪ್ರಕಾಶ್ ಭಟ್ ಅವರು ಕೋಮಾ ಸ್ಥಿತಿದೆ ತಲುಪ್ಪಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ 9:20ಕ್ಕೆ ಅಸುನೀಗಿದ್ದಾರೆ.
ಸೂರ್ಯಪ್ರಕಾಶ್ ಅವರು ನಗರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢ ಶಾಲಾ ಶಿಕ್ಷಣ ಪಡೆದಿದ್ದು ಬಳಿಕ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಹಾಗೆಯೇ ಚಾರ್ಟೆಡ್ ಅಕೌಂಟೆಡ್‌ಗಳಾದ ಕಾಮತ್ ಮತ್ತು ರಾವ್ ಎಂಬವರಲ್ಲಿ ಸಿ.ಎ. ಶಿಕ್ಷಣ ಪಡೆದರು. ಬಳಿಕ ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (ಕೆಸಿಸಿಐ) ಖಜಾಂಚಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ನವದೆಹಲಿಯ ಫಿಕ್ಕಿ (ಎಫ್‌ಐಸಿಸಿಐ) ಹಣಕಾಸು ಮತ್ತು ಬ್ಯಾಂಕಿಂಗ್ ಸಮಿತಿಯ ಸದಸ್ಯರಾಗಿರುವ ಅವರು ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಕಸ್ಟಮ್ಸ್‌ನ ಸಲಹಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನ ಕರಾವಳಿ ಆಟೊಮೊಟಿವ್ ಸ್ಪೋರ್ಟ್ಸ್ ಕ್ಲಬ್‌ನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಮಂಗಳೂರು ಸಮೀಪದ ಸೋಮೇಶ್ವರದ ಶ್ರೀ ಸೋಮನಾಥ ದೇವಾಲಯದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ಅವಿರತವಾಗಿ ಗುರುತಿಸಿಕೊಂಡಿದ್ದರು.
ಮೂಲತಃ ಮಂಗಳೂರಿನವರಾದ ಸೂರ್ಯಪ್ರಕಾಶ್ ಅವರು ಮಂಗಳೂರು ರೋಟರಿ ಕ್ಲಬ್‌ನಲ್ಲಿ ಯುವಕರಾಗಿದ್ದಾಗಲೇ ಸಕ್ರಿಯ ರೋಟರಿಯನ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದರು. ಅವರು 1989ರಲ್ಲಿ ಮಂಗಳೂರು ರೋಟರಿ ಕ್ಲಬ್ ಸೇರ್ಪಡೆಗೊಂಡಿದ್ದು ಬಳಿಕ 1995-96ರ ಅವಧಿಯಲ್ಲಿ ಮಂಗಳೂರು ರೋಟರಿ ಕ್ಲಬ್ ಸೇರಿದಂತೆ ಡಿಸ್ಟಿಕ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1999-2000ರ ವೇಳೆ ಮಂಗಳೂರು ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವದ ಸಂದರ್ಭ ಸೂರ್ಯ ಪ್ರಕಾಶ್ ಅವರು ಕ್ಲಬ್‌ನ ಅಧ್ಯಕ್ಷ ಸ್ಥಾನ ಪಡೆದು ಸೇವೆ ಸಲ್ಲಿಸಿದ್ದಾರೆ. 2003-04ರ ಅವಧಿಯಲ್ಲಿ ರೋಟರಿ ಡಿಸ್ಟಿಕ್ 3180ರ ಗವರ್ನರ್ ಆಗಿದ್ದಾರೆ. ಪ್ರಸ್ತುತ ಅವರು ರೋಟರಿ ಜಿಲ್ಲಾ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.