(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.23. ಕನ್ನಡದ ಮೊತ್ತ ಮೊದಲ ಖಾಸಗಿ ಸುದ್ದಿ ವಾಹಿನಿ ತಮಿಳುನಾಡು ಮೂಲದ ‘ಸನ್ ನೆಟ್ ವರ್ಕ್’ನ ಅಂಗಸಂಸ್ಥೆ ಉದಯ ನ್ಯೂಸ್ ಅಂತ್ಯದ ಸಮಯ ಕೂಡಿ ಬಂದಿದೆ.
ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ನೌಕರರು ನಿರುದ್ಯೋಗಿಗಳಾಗಲಿದ್ದಾರೆ. ಬುಧವಾರದಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಮಿಕ ಇಲಾಖೆಗೆ ಪತ್ರ ಬರೆದಿರುವ ‘ಸನ್ ನೆಟ್ ವರ್ಕ್’ ಸಂಸ್ಥೆ ಅಕ್ಟೋಬರ್ 24 ರಂದು ಅಧಿಕೃತವಾಗಿ ಉದಯ್ ನ್ಯೂಸ್ ಚಾನೆಲನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದು, ಕಾರ್ಮಿಕ ಕಾನೂನು ಪ್ರಕಾರ ನೌಕರರಿಗೆ ಎರಡು ತಿಂಗಳ ಮುಂಚೆಯೇ ನೋಟೀಸನ್ನು ನೀಡಲಾಗಿದೆ ಎಂದು ಹೇಳಿಕೊಂಡಿದೆ. ಚಾನೆಲ್ ವ್ಯಾವಹಾರಿಕವಾಗಿ ನಷ್ಟ ಅನುಭವಿಸುತ್ತಿದ್ದು, ವೀಕ್ಷಕರ ಸಂಖ್ಯೆ ತೀರಾ ಕುಸಿದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
1997-98 ರಲ್ಲಿ ಉದಯ ಚಾನೆಲ್ ನ ಸುದ್ದಿ ವಿಭಾಗ ಸ್ಥಾಪಿತವಾಗಿದ್ದು, ಅದು ಕನ್ನಡದ ಮೊದಲ ಖಾಸಗಿ ವಾಹಿನಿ ಸುದ್ದಿ ವಿಭಾಗವಾಗಿತ್ತು. ಅತಿ ಜನಪ್ರಿಯವಾಗಿದ್ದ ‘ಉದಯ ನ್ಯೂಸ್’, ಸುದ್ದಿ ಚಾನೆಲ್ ಆಗಿ ಪರಿವರ್ತಿತವಾಗಿತ್ತು. ತದನಂತರ ಹಲವಾರು ಸುದ್ದಿ ಸಂಸ್ಥೆಗಳು ಹುಟ್ಟಿಕೊಂಡಿದ್ದರಿಂದ ಪೈಪೋಟಿಯ ನಡುವೆ ಸಂಸ್ಥೆಯನ್ನು ಉಳಿಸಲು ಕಷ್ಟಕರವಾದುದರಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.