(ನ್ಯೂಸ್ ಕಡಬ) newskadaba.com ಮೈಸೂರು, ಆ.23. ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಹಾಡುಹಗಲೇ ಕಾರಿನಲ್ಲಿ ಅಪಹರಣಕ್ಕೆ ವಿಫಲ ಯತ್ನ ನಡೆಸಲಾಗಿದ್ದು, ವಿದ್ಯಾರ್ಥಿನಿ ಕಾರು ಚಾಲಕನ ಕೈಗೆ ಕಚ್ಚಿ ತಪ್ಪಿಸಿಕೊಂಡ ಘಟನೆ ಇಲ್ಲಿನ ನಂಜನಗೂಡಿನಲ್ಲಿ ಬುಧವಾರದಂದು ನಡೆದಿದೆ.
ಚಾಮರಾಜನಗರದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮಂಡ್ಯ ಮೂಲದ ರಾಧಾ ಅಪಹರಣಕ್ಕೆ ಒಳಗಾಗಿ ನಂತರ ತಪ್ಪಿಸಿಕೊಂಡು ಬಂದಿರುವ ಯುವತಿ. ರಾಧಾ ತನ್ನ ಪರಿಚಯಸ್ಥರ ಭೇಟಿಗೆಂದು ನಂಜನಗೂಡಿಗೆ ಬಂದಿದ್ದು, ಹಿಂತಿರುಗಲು ನಂಜನಗೂಡಿನ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಲ್ಲೆ ಇದ್ದ ಅಪರಿಚಿತ ಮಹಿಳೆಯು ರಾಧಾ ಜೊತೆ ಮಾತುಕತೆ ಆರಂಭಿಸಿದ್ದಾಳೆ. ಆಗ ರಾಧಾ ಹೇಳಿದ ತನ್ನ ಪರಿಚಯಸ್ಥರನ್ನು ತನಗೂ ಪರಿಚಯಸ್ಥರು ಎಂದು ಹೇಳಿ ನಂಬಿಸಿದ ಮಹಿಳೆ, ನಿಮ್ಮನ್ನು ಡ್ರಾಪ್ ಮಾಡ್ತೀನಿ ಎಂದು ಹೇಳಿ ಸ್ಕಾರ್ಪಿಯೋ ಕಾರನ್ನು ಹತ್ತಿಸಿದ್ದಾಳೆ. ಸ್ವಲ್ಪ ದೂರ ಹೋಗುವಾಗ ಕಾರಿನ ಚಾಲಕನ ನಡವಳಿಕೆಯಿಂದ ಅನುಮಾನಗೊಂಡ ರಾಧಾ ತನ್ನನ್ನು ಕಾರ್ ನಿಂದ ಇಳಿಸಲು ಹೇಳಿದ್ದಾಳೆ. ಆಗ ರಾಧಾಳ ಬಾಯಿಯನ್ನು ಮುಚ್ಚಲು ಮಹಿಳೆ ಮತ್ತು ಡ್ರೈವರ್ ಮುಂದಾಗಿದ್ದಾರೆ. ತಕ್ಷಣ ರಾಧಾ ಡ್ರೈವರ್ ಕೈಗೆ ಕಚ್ಚಿ ಕಾರ್ ನಿಂದ ಕೆಳಗೆ ಜಿಗಿದಿದ್ದಾಳೆ. ಇದರಿಂದ ಆತಂಕಗೊಂಡ ಕಾರು ಚಾಲಕ ತಾನು ಪರಾರಿಯಾಗಲೆಂದು ಕಾರಿನ ವೇಗವನ್ನು ಹೆಚ್ಚಿಸಿದ ಪರಿಣಾಮ ಸ್ಕಾರ್ಪಿಯೋ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಸರಿದಿದ್ದು, ಚಾಲಕ ಇಳಿದು ಪರಾರಿಯಾಗಿದ್ದಾನೆ. ಯುವತಿ ನೀಡಿದ ದೂರಿನನ್ವಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.