ಮನೆ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com, ಕಡಬ, ಡಿ.30  ಕಡಬ ತಾಲೂಕು ಪೆರಾಬೆ ಗ್ರಾಮದ ನಡ್ಡೋಟ್ಟು ನಿವಾಸಿ ಬಾಳಪ್ಪ ಪೂಜಾರಿ(67ವ) ತಮ್ಮ ಮನೆ ಸಮೀಪದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ತಿಳಿದು ಬಂದಿದೆ.


ಮೃತರು ಶುಕ್ರವಾರ ತಮ್ಮ ಸ್ನೇಹಿತನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸಂಜೆ ಮನೆಯಿಂದ ತೆರಳಿದ್ದರು. ಗೆಳೆಯನ ಮನೆಯಲ್ಲೇ ರಾತ್ರಿ ತಂಗಿರಬಹುದೆಂದು ಅಂದಾಜಿಸಿದ್ದ ಮನೆಯವರು ಬೆಳಗ್ಗಿನವರೆಗೆ ಹುಡುಕಾಡುವ ಕೆಲಕ್ಕೆ ಕಾರ್ಯಪ್ರವೃತ್ತರಾಗಿರಲಿಲ್ಲ. ಮೃತರು ಕಾರ್ಯಕ್ರಮ ಮುಗಿಸಿ ಮನೆಗೆ ರಾತ್ರಿ ಹೊರಟಿದ್ದಾರೆ ಎಂಬ ಮಾಹಿತಿ ಗೆಳೆಯನ ಮನೆಯವರಿಂದ ತಿಳಿದು ಬಂದ ಕಾರಣ ಹುಡುಕಾಟ ಪ್ರಾರಂಭಿಸಿದ್ದರು. ಮನೆಗೆ ಬರುವ ಅಡಿಕೆ ತೋಟದ ದಾರಿಯ ಪಕ್ಕದಲ್ಲೇ ಬೃಹತ್ ಕೆರೆಯಿದ್ದ ಕಾರಣ ಕೆರೆಯನ್ನು ಪರಿಶೀಲಿಸಿದ್ದರು. ಈ ವೇಳೆ ಮೃತರು ಬಳಸುತ್ತಿದ್ದ ಟಾರ್ಚ್, ಬೀಡಿ ಕಟ್ಟು, ಒಂದು ಚಪ್ಪಲಿ ನೀರಿನಲ್ಲಿ ತೇಲುತ್ತಿರುವುದನ್ನು ಮೃತರ ಸೊಸೆ ಪತ್ತೆ ಹಚ್ಚಿ ಮನೆಯವರಿಗೆ ಸುದ್ದಿ ತಿಳಿಸಿದ್ದರು. ತಕ್ಷಣ ಕೆರೆಯನ್ನು ಪರಿಶೀಲಿಸಿದಾಗ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಳೆ ಮನೆಗೆ ಬರುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಮೃತರ ಸಹೋದರನ ಪುತ್ರ ಯೋಗೀಶ್ ನೀಡಿರುವ ದೂರಿನಂತೆ ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಸ್ಥಳ ಪರಿಶೀಲಿಸಿ ಶವ ಮಹಜರು ನಡೆಸಿದರು. ಬಳಿಕ ಶವವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

Also Read  ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್ ನಿಧನ

error: Content is protected !!
Scroll to Top