(ನ್ಯೂಸ್ ಕಡಬ) newskadaba.com ಕಡಬ, ಡಿ.20. ಪೌರತ್ವ ನಿಯಮವನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಎರಡು ಜೀವ ಬಲಿಯಾಗಿರುವುದನ್ನು ಖಂಡಿಸಿ ರಾಜ್ಯದ ವಿವಿಧೆಡೆ ಬಂದ್ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಕಡಬ ಪೇಟೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡಿದ್ದಾರೆ. ಅದರಂತೆ ಕೆಲವರು ಬಂದ್ ಮಾಡಿದ್ದು, ಇನ್ನು ಕೆಲವರು ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಒಟ್ಟಿನಲ್ಲಿ ಕಡಬ ಪೇಟೆಯು ಭಾಗಶಃ ಬಂದ್ ಆಗಿದೆ.
ಕಡಬ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ವರ್ತಿಸುತ್ತಿದ್ದು, 144 ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ಮೇಲಾಧಿಕಾರಿಗಳ ಆದೇಶದಂತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ನಾವು ಮನವಿ ಮಾಡಿದ್ದು, ಅದರಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತಿದ್ದಾರೆ. ಕೆಲವರು ಅಂಗಡಿಗಳನ್ನು ಮುಚ್ಚಿದ್ದು, ಇನ್ನು ಕೆಲವರು ತೆರೆದಿದ್ದಾರೆ ಎಂದು ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ತಿಳಿಸಿದ್ದಾರೆ.