(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿಕೆ ನೀಡಿರುವುದು ಈಗ ಅವರಿಗೆ ಮುಳುವಾದ ಲಕ್ಷಣ ಕಂಡುಬರುತ್ತಿದೆ.
ಶಾಸಕ ಖಾದರ್ ಹೇಳಿಕೆ ನೀಡಿ ದಿನ ಕಳೆಯುವಷ್ಟರಲ್ಲೇ ತವರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾರೂಪಕ್ಕೆ ತಾಳಿ ಇಬ್ಬರು ಪ್ರತಿಭಟನಾಕಾರರು ಪೊಲೀಸ್ ಗುಂಡೇಟಿಗೆ ಬಲಿಯಾಗಿದ್ದಾರೆ. ಖಾದರ್ ಹೇಳಿಕೆಯ ವಿರುದ್ಧ ಬಿಜೆಪಿ ಮುಖಂಡರು ಪೊಲೀಸ್ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಖಾದರ್ ಹೇಳಿಕೆಯು ಉರಿಯುವ ಬೆಂಕಿಗೆ ತುಪ್ಪ ಸುರಿಯಿತಾ ಎನ್ನುವ ಪ್ರಶ್ನೆ ಇದೀಗ ಮೂಡತೊಡಗಿದೆ.
ಈ ನಡುವೆ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಶಾಸಕ ಯು.ಟಿ.ಖಾದರ್ ರವರ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಹೇಳಿಕೆ ನೀಡುವ ಮೂಲಕ ಜವಾಬ್ದಾರಿಯುತ ಸ್ಥಾನದಲ್ಲಿರುವ ಖಾದರ್ ಅಕ್ರಮ ನುಸುಳುಕೋರರ ಪರವಾಗಿ ಮಾತನಾಡಿದ್ದಾರೆ. ಸಂವಿಧಾನ ಪರವಾಗಿ ಇರುವ ಮುಸ್ಲಿಮರು ಖಾದರ್ ಅವರ ಹೇಳಿಕೆಯನ್ನು ಖಂಡಿತ ಒಪ್ಪುವುದಿಲ್ಲ. ಜಿಲ್ಲೆಯ ಜಾತ್ಯತೀತ ಹಣೆಪಟ್ಟಿಯ ಕೋಮುವಾದಿ ನಾಯಕ ಇವರಾಗಿದ್ದು, ಈ ಕಾಯ್ದೆಯನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸುವ ಮೂಲಕ ಸಾಮರಸ್ಯ ಕದಡಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಯಾಕಾಗಿ ರಾಜ್ಯ ಹೊತ್ತಿ ಉರಿಯಬೇಕು ಎಂಬ ಬಗ್ಗೆ ಖಾದರ್ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರು.