ಮಂಗಳೂರು, ಡಿ.19: ಕೇಂದ್ರ ಸರಕಾರದ ಜನವಿರೋಧಿ ನೀತಿಯಾದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಸಂಧರ್ಭದಲ್ಲೂ ಕೂಡಾ ವಿವಾದಾತ್ಮಕವಾದ ಕಾಯ್ದೆಗಳನ್ನು ಜಾರಿ ಮಾಡಿರುವ ಕೇಂದ್ರ ಸರಕಾರದ ವಿರುದ್ಧವಾಗಿ ಜನರು ಆಕ್ರೋಶಗೊಂಡು ಬೀದಿಗಿಳಿದು ಸಂವಿಧಾನ ಬದ್ದವಾಗಿ ಶಾಂತಿಯುತವಾಗಿ ಹೋರಾಟ ಮಾಡುವ ಸಂಧರ್ಭದಲ್ಲಿ ಮಂಗಳೂರು ಪೊಲೀಸ್ ಇಲಾಖೆ ಜಿಲ್ಲಾಧ್ಯಂತ ಸಿಆರ್ ಪಿಸಿ ಸೆಕ್ಷನ್ 144 ಪ್ರಕಾರ ನಿಷೇದಾಜ್ಞೆ ಜಾರಿ ಮಾಡಿ ಜನರ ಸಂವಿಧಾನ ಬದ್ದ ಹಕ್ಕುಗಳನ್ನು ಕಸಿಯುವ ಪ್ರಕ್ರಿಯೆಗೆ ಕೈ ಹಾಕಿರುವುದು ಖಂಡನೀಯ ಎಂದು ಎಸ್ಡಿಪಿಐ ಆರೋಪಿಸಿದೆ.
ಈ ಹಿಂದೆ ಸಂಘಪರಿವಾರ ಸಂಘಟನೆಗಳು ಲಾಠಿ ಮತ್ತು ತಲ್ವಾರ್ ಗಳನ್ನು ಹಿಡಿದುಕೊಂಡು ಜಿಲ್ಲಾದ್ಯಂತ ಕೋಮು ಪ್ರಚೋದನಕಾರಿಯಾಗಿ ಘೋಷಣೆ ಕೂಗುತ್ತಾ ರ‌್ಯಾಲಿಗಳನ್ನು ನಡೆಸುತ್ತಿದ್ದಾಗ ಯಾವುದೇ ನಿಷೇದಾಜ್ಞೆ ಜಾರಿ ಮಾಡದೇ ಈಗ ಜಾತ್ಯತೀತ ನಿಲುವಿನ ಪಕ್ಷಗಳು ಮತ್ತು ಸಂಘಟನೆಗಳು ಪ್ರಜಾಪ್ರಭುತ್ವ ರಾಷ್ಟದಲ್ಲಿ ಸಂವಿಧಾನ ನೀಡಿದ ಹಕ್ಕಿನ ಪ್ರಕಾರ ಸರ್ಕಾರದ ಕೆಟ್ಟ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡುತ್ತಿರುವಾಗ, ಪ್ರತಿಭಟಿಸುತ್ತಿರುವಾಗ ಹೋರಾಟಗಾರರಿಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ನೀಡಬೇಕೆ ಹೊರತು ಸಂವಿಧಾನ ನೀಡಿರುವ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸುತ್ತಿರುವುದು ಸಂವಿಧಾನಕ್ಕೆ ನೀಡುತ್ತಿರುವ ಕೊಡಲಿಯೇಟಾಗಿದೆ.
ಆದ್ದರಿಂದ ಪೊಲೀಸ್ ಇಲಾಖೆಯ ಇಂತಹ ದುರುದ್ದೇಶಪೂರಿತ ನಿಷೇದಾಜ್ಞೆಗಳ ವಿರುದ್ಧ ಮತ್ತು ಸಂವಿಧಾನದ ಉಲ್ಲಂಘನೆಗಳ ನಿಯಮಗಳ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಂದಿನ ದಿನಗಳಲ್ಲಿ ಕಮಿಷನರ್ ಕಛೇರಿ ಛಲೋ ನಡೆಸಲಿದ್ದೇವೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಾಹುಲ್ ಎಸ್.ಎಚ್ ಪ್ರಕಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.